;Resize=(412,232))
ಬೆಂಗಳೂರು : ಪಶ್ಚಿಮಘಟ್ಟದ ಕುರಿತಾದ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಹಾಗೂ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಕುರಿತು ಚರ್ಚೆಗೆ ನಿಗದಿಯಂತೆ ಸೋಮವಾರದಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯಲಿದೆ.
ಸೆ.21ರಿಂದ 23ರವರೆಗೆ ನಡೆಯುವ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನದಲ್ಲಿ ಈ ವಿಷಯ ಸುದೀರ್ಘವಾಗಿ ಚರ್ಚೆ ನಡೆಸಿ ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಭಾವನೆ ಆಧರಿಸಿ ಅಧಿಸೂಚನೆ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಕಸ್ತೂರಿರಂಗನ್ ವರದಿ ಆಧರಿಸಿ ರಾಜ್ಯ ಪಶ್ಚಿಮಘಟ್ಟ ಪ್ರದೇಶದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವುದರಿಂದ 1,449 ಗ್ರಾಮಗಳ ಜನ ತಮ್ಮ ಬದುಕು ಅತಂತ್ರವಾಗುವ ಬಗ್ಗೆ ಆತಂಕಗೊಂಡಿದ್ದಾರೆ. ಈಗಾಗಲೇ ಈ ವರದಿ ವಿರುದ್ಧ ಆಡಳಿತ ಪಕ್ಷ ಮಾತ್ರವಲ್ಲದೆ ಪ್ರತಿಪಕ್ಷಗಳಿಂದಲೂ ವಿರೋಧವಿದೆ. ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕರಡು ಅಧಿಸೂಚನೆಯಿಂದ ಆತಂಕದಲ್ಲಿರುವ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಭಿಪ್ರಾಯ ಆಲಿಸಿದ್ದಾರೆ. ಈ ವಿಚಾರದಲ್ಲಿ ಜನಾಭಿಪ್ರಾಯದ ಪರ ನಮ್ಮ ಸರ್ಕಾರ ನಿಲ್ಲಲಿದೆ. ಕರಡು ಅಧಿಸೂಚನೆ ಜಾರಿ ವಿರುದ್ಧ ನಿರ್ಣಯ ಕೈಗೊಂಡು ಸರ್ವ ಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕೇಂದ್ರದ ಮೇಲೆ ಒತ್ತಡ ಹಾಕುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ.
ಇನ್ನು, ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಎದುರಾಗಿರುವ ಭೀಕರ ಬರ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಈಗಾಗಲೇ 124 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇದರಿಂದ ಈವರೆಗೆ 18 ಸಾವಿರ ಕೋಟಿ ರು.ನಷ್ಟು ಬೆಳೆ ನಷ್ಟ ಸಂಭವಿಸಿರುವುದಾಗಿಯೂ ಹೇಳಿದೆ. ಬರ ಪರಿಶೀಲನೆ ಇನ್ನೂ ಮುಂದುವರೆದಿದ್ದು, ಸದನದಲ್ಲಿ ಇನ್ನಷ್ಟು ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸುವ ಸಾಧ್ಯತೆ ಇದೆ. ಜತೆಗೆ ಬರದಿಂದ ಈ ಬಾರಿ ಉಂಟಾಗಿರುವ ಒಟ್ಟಾರೆ ನಷ್ಟ ಎಷ್ಟು, ರೈತರು ಎದುರಿಸುತ್ತಿರುವ ಸಂಕಷ್ಟ, ಜನ, ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರು, ಮೇವಿನ ಸಮಸ್ಯೆಗಳ ಕುರಿತು ಸದನದಲ್ಲಿ ಸದಸ್ಯರು ಬೆಳಕು ಚೆಲ್ಲಲಿದ್ದಾರೆ. ಇದನ್ನು ಆಧರಿಸಿ ಎನ್‌ಡಿಆರ್‌ಎಫ್ ಮಾನದಂಡಗಳ ಆಧಾರದಲ್ಲಿ ರಾಜ್ಯಕ್ಕೆ ಎಷ್ಟು ಪರಿಹಾರ ನೀಡಬೇಕೆಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವ ಕುರಿತು ನಿರ್ಧರಿಸುವುದು ಹಾಗೂ ದೆಹಲಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಬರ ಪರಿಹಾರಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಸದನದಲ್ಲಿ ಸರ್ಕಾರ ನಿರ್ಧಾರ ಮಾಡುವ ಸಾಧ್ಯತೆಗಳಿವೆ.
ಕಳೆದ ಜುಲೈ/ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದ್ದರಿಂದ ಬೇರೆ ಯಾವುದೇ ವಿಚಾರಗಳೂ ಚರ್ಚೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದಲ್ಲಿ ಬರಗಾಲ ಹಾಗೂ ಪಶ್ಚಿಮಘಟ್ಟಗಳ ವಿಚಾರದಲ್ಲಿ ಮಾತ್ರ ಚರ್ಚೆ ನಡೆಯಲಿದೆ. ಕಲಾಪ ಪಟ್ಟಿಯಲ್ಲಿ ಬೇರೆ ಯಾವುದೇ ವಿಚಾರ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಮಧ್ಯೆ, ಪ್ರತಿಪಕ್ಷಗಳು ರಾಜ್ಯದಲ್ಲಿ ಬರಗಾಲ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇದರಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಬರ ಘೋಷಣೆಯಲ್ಲಿ ನಡೆಸಿದ ತಾರತಮ್ಯ, ಗ್ಯಾರಂಟಿಗಳಿಗೆ ಹಾಕಿರುವ ಕತ್ತರಿ, ಪಿಂಚಣಿ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿದೆ.
ಆಡಳಿತಾರೂಢ ಕಾಂಗ್ರೆಸ್ಸಿಗರು ಕೇಂದ್ರದಿಂದ ಬರ ಪರಿಹಾರಕ್ಕೆ ತ್ವರಿತ ಸ್ಪಂದನೆ ಸಿಗದಿರುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಜತೆಗೆ ಕಸ್ತೂರಿ ರಂಗನ್ ವರದಿ ಅನ್ವಯ ಮಾಡಿರುವ ಅಧಿಸೂಚನೆಯಿಂದ ಪಶ್ಚಿಮಘಟ್ಟಗಳ ವ್ಯಾಪ್ತಿ ಜಿಲ್ಲೆಗಳಿಗೆ ಆಗುವ ಹಾನಿ ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.