ಸಿಕ್ಕಿಂ ಸೂಕ್ಷ್ಮ, ಆದರೆ ಕ್ರೈಂ ಶೂನ್ಯ: ರಾಜ್ಯಪಾಲ

Published : Sep 20, 2026, 10:22 AM IST
Governor Om Prakash Mathur

ಸಾರಾಂಶ

‘ಸಿಕ್ಕಿಂ ರಾಜ್ಯ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದರೂ ಶೂನ್ಯ ಅಪರಾಧ ಕಾಯ್ದುಕೊಂಡಿದೆ. ಅಲ್ಲದೆ, ದೇಶದಲ್ಲೇ ಮೊದಲು ಶೇ.100 ರಷ್ಟು ನೈಸರ್ಗಿಕ ಕೃಷಿ ಅಳವಡಿಸಿಕೊಂಡ ರಾಜ್ಯವಾಗಿದ್ದು ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ, ಪರಿಸರ ಸಂರಕ್ಷಣೆ, ಸುಧಾರಿತ ಶಿಕ್ಷಣ ವ್ಯವಸ್ಥೆಗೆ ಮಾದರಿ ಆಗಿದೆ

ಗ್ಯಾಂಗ್ಟಕ್‌ (ಸಿಕ್ಕಿಂ) : ‘ಸಿಕ್ಕಿಂ ರಾಜ್ಯ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದರೂ ಶೂನ್ಯ ಅಪರಾಧ ಕಾಯ್ದುಕೊಂಡಿದೆ. ಅಲ್ಲದೆ, ದೇಶದಲ್ಲೇ ಮೊದಲು ಶೇ.100 ರಷ್ಟು ನೈಸರ್ಗಿಕ ಕೃಷಿ ಅಳವಡಿಸಿಕೊಂಡ ರಾಜ್ಯವಾಗಿದ್ದು ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ, ಪರಿಸರ ಸಂರಕ್ಷಣೆ, ಸುಧಾರಿತ ಶಿಕ್ಷಣ ವ್ಯವಸ್ಥೆಗೆ ಮಾದರಿ ಆಗಿದೆ’ ಎಂದು ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ ಮಾಥೂರ್‌ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮಾಧ್ಯಮ ಪ್ರತಿನಿಧಿಗಳ ನಿಯೋಗದ ಜೊತೆ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಸಿಕ್ಕಿಂ ಅತ್ಯಂತ ಸೂಕ್ಷ್ಮ ಪ್ರದೇಶ. ಹೀಗಿದ್ದರೂ ಇಲ್ಲಿ ಶೂನ್ಯ ಅಪರಾಧ ಪ್ರಮಾಣ ಕಾಯ್ದುಕೊಳ್ಳಲಾಗಿದೆ. ಕಳೆದ ಹಲವು ವರ್ಷಗಳಿಂದ ಯಾವುದೇ ಅಪರಾಧಗಳು ಸಂಭವಿಸಿಲ್ಲ. ಜತೆಗೆ ಇಲ್ಲಿ ಸುವ್ಯವಸ್ಥಿತ ಹಾಗೂ ಶಿಸ್ತುಬದ್ಧ ವಾಹನ ಸಂಚಾರ ವ್ಯವಸ್ಥೆಯಿದೆ. ಇದು ಇತರ ರಾಜ್ಯಗಳಿಗೆ ಮಾದರಿ ಎಂದು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ 17 ಲಕ್ಷಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡಿದ್ದು, ಮುಂದಿನ ವರ್ಷ 25 ಲಕ್ಷ ಪ್ರವಾಸಿಗರ ಆಗಮನ ನಿರೀಕ್ಷಿಸಲಾಗಿದೆ. ಸಂಪೂರ್ಣ, ಸಾಕ್ಷರತೆ, ಸುಧಾರಿತ ಶಿಕ್ಷಣ ವ್ಯವಸ್ಥೆ, ವೈಬ್ರೆಂಟ್‌ ವಿಲೇಜ್‌ ಯೋಜನೆಯ ಮೂಲಕ ಗ್ರಾಮೀಣ ಮೂಲಸೌಕರ್ಯ ಸುಧಾರಣೆ ಸೇರಿ ಹಲವು ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎಂದು ಮಾಹಿತಿ ನೀಡಿದರು.

ಹೆಣ್ಣು ಮಗು ಜನಿಸಿದರೆ 108 ಗಿಡ ನೆಟ್ಟು ಪೋಷಣೆ:

ರಾಜ್ಯದ ಮಾದರಿ ಪರಿಸರ ಸಂರಕ್ಷಣಾ ನಡೆ ವಿವರಿಸಿದ ರಾಜ್ಯಪಾಲರು, ಸಿಕ್ಕಿಂನಲ್ಲಿ ಹೆಣ್ಣು ಮಗು ಜನಿಸಿದಾಗ ಆ ಕುಟುಂಬವು 108 ಗಿಡಗಳನ್ನು ನೆಟ್ಟು, ಪ್ರತಿ ವರ್ಷ ಮಗುವಿನೊಂದಿಗೆ ಆ ಗಿಡದ ಛಾಯಾಚಿತ್ರ ತೆಗೆದುಕೊಳ್ಳುವ ‘ಮೇಕೋ ರೂಖ್‌, ಮೇಕೋ ಸಂತತಿ’ ಎಂಬ ಸುಂದರ ಪದ್ಧತಿ ಇದೆ. ಇದಲ್ಲದೆ ಈ ಭಾಗದ ಜನರಿಗೆ ಪರಿಸರ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿಯಿದೆ ಎಂದರು.

ನೈಸರ್ಗಿಕ ಕೃಷಿ

ಸಿಕ್ಕಿಂ ದೇಶದಲ್ಲೇ ಮೊದಲ ಶೇ.100 ಪ್ರತಿಶತ ನೈಸರ್ಗಿಕ ಕೃಷಿ ಅಳವಡಿಸಿಕೊಂಡ ರಾಜ್ಯ. ಇಲ್ಲಿನ ಜನರಿಗೆ ಪ್ರಕೃತಿ ಬಗ್ಗೆ ಗೌರವ ಜತೆಗೆ ಆರೋಗ್ಯದ ಬಗ್ಗೆ ಕಾಳಜಿಯಿದೆ. ಇದಕ್ಕೆ ನೈಸರ್ಗಿಕ ಕೃಷಿಯೇ ಸಾಕ್ಷಿ ಎಂದು ಹೇಳಿದರು.

ಈ ವೇಳೆ ಲೋಕಸಭಾ ಸದಸ್ಯ ಇಂದ್ರಹಂಗ್‌ ಸುಬ್ಬಾ, ಬೆಂಗಳೂರಿನ ಪಿಐಬಿ ಸಹಾಯಕ ನಿರ್ದೇಶಕ ಎಂ.ಮಧು, ಸಿಕ್ಕಿಂನ ಪಿಐಬಿ ಸಹಾಯಕ ನಿರ್ದೇಶಕ ಮಾನಸ್‌ ಪ್ರತಿಮ್‌ ಶರ್ಮಾ ಸೇರಿ ಹಲವರು ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಜಿ ರಾಮ್‌ ಜಿ’ ಅಡಿ ವಸತಿ ಯೋಜನೆ ಕೈಕೊಳ್ಳಲು ಕೇಂದ್ರ ಅವಕಾಶ: ಖಂಡ್ರೆ
ಸಿಎಂ ಕಾರ್ಯಕ್ರಮದಲ್ಲಿ ವಂದೇ ಗೊಂದಲ: ಚನ್ನಬಸಪ್ಪ ಆಕ್ಷೇಪ