‘ಜಿ ರಾಮ್‌ ಜಿ’ ಅಡಿ ವಸತಿ ಯೋಜನೆ ಕೈಕೊಳ್ಳಲು ಕೇಂದ್ರ ಅವಕಾಶ: ಖಂಡ್ರೆ

Published : Sep 20, 2026, 09:40 AM IST
Eshwar khandre on VB G Ram G Scheme

ಸಾರಾಂಶ

ವಿಬಿಜಿ ರಾಮ್ ಜಿ ಅಡಿ ರಾಜ್ಯದ ವಸತಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು : ವಿಬಿಜಿ ರಾಮ್ ಜಿ ಅಡಿ ರಾಜ್ಯದ ವಸತಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಬಡವರಿಗೆ ಸಮರ್ಪಿತವಾದ ಬಸವ ವಸತಿ ಯೋಜನೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಿಸಲು ನೆರವಾಗುವ ದೇವರಾಜ ಅರಸು ವಸತಿ ಯೋಜನೆ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಗ್ರಾಮೀಣ ಜನರಿಗೆ ವಸತಿ ಕಲ್ಪಿಸುವ ಡಾ.ಅಂಬೇಡ್ಕರ್ ನಿವಾಸ ಯೋಜನೆಯಡಿ ಮನೆ ನಿರ್ಮಿಸಲೂ ಈಗ ವಿಬಿಜಿ ರಾಮ್ ಜಿಯಲ್ಲಿ ಅವಕಾಶವಿದೆ ಎಂದು ಹೇಳಿದರು.

ಕಾಮಗಾರಿ ಸಂಖ್ಯೆ ಹೆಚ್ಚಳ:

ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಅಡಿ ಅನುಮೋದಿಸಿದ್ದ 318 ಕಾಮಗಾರಿಗಳ ಸಂಖ್ಯೆಯನ್ನು ಈಗ 375ಕ್ಕೆ ಹೆಚ್ಚಿಸಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ರಾಜ್ಯ ವಸತಿ ಯೋಜನೆ, ಸಮುದಾಯ ಕುಶಲಕರ್ಮಿಗಳ ಕೇಂದ್ರ ನಿರ್ಮಾಣ, ವೈಯಕ್ತಿಕ ಕಾಮಗಾರಿಯಡಿ ರೇಷ್ಮೆ ಹುಳು ಸಾಕಣೆ ಮನೆ (ಘಟಕ) ಹಾಗೂ ಒಂದೇ ಭೂಮಿಯಲ್ಲಿ ಮರಗಳು, ಹುಲ್ಲುಗಾವಲು (ಮೇವು) ಮತ್ತು ಜಾನುವಾರು ಸಾಕಣೆಯನ್ನು ಸಂಯೋಜಿಸಿ ಬೆಳೆಸುವ ಸಿಲ್ವಿ ಪ್ಯಾಷ್ಚರ್ ಸಹ ಸೇರಿದೆ ಎಂದು ಸಚಿವ ಮಾಹಿತಿ ನೀಡಿದರು.

ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಹೆಚ್ಚಿನ ಮಾನವ ದಿನ ಸೃಜಿಸುವಂತೆ ಮತ್ತು ಯಾವುದೇ ಗ್ರಾಮೀಣ ಬಡ ಜನರು ಉದ್ಯೋಗ ಸಿಗದೆ ಗುಳೆ ಅಥವಾ ವಲಸೆ ಹೋಗದಂತೆ ತಡೆಯಲು ಕ್ರಮ ವಹಿಸುವಂತೆ ಉನ್ನತಾಧಿಕಾರಿಗಳಿಗೆ ತಿಳಿಸಿದರು.

ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು, ನಿಯಮ ತಿದ್ದುಪಡಿ:

ಅ.2ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿ, ನವೆಂಬರ್ ತಿಂಗಳಲ್ಲಿ 10 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಮತ್ತು ಅಭಿಯಾನ ನಡೆಸಲು ಅನುವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ ಮತ್ತು ಶುಲ್ಕಗಳು) ನಿಯಮ 2025ಕ್ಕೆ ಅಗತ್ಯ ಮತ್ತು ಸೂಕ್ತ ತಿದ್ದುಪಡಿ ಮಾಡುವಂತೆಯೂ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತೆ ಡಾ। ಅರುಂಧತಿ ಚಂದ್ರಶೇಖರ್, ಇ-ಸ್ವತ್ತು ನಿರ್ದೇಶಕ ಗಿರೀಶ್ ಬದೋಲೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ಕಾರ್ಯಕ್ರಮದಲ್ಲಿ ವಂದೇ ಗೊಂದಲ: ಚನ್ನಬಸಪ್ಪ ಆಕ್ಷೇಪ
ಡಿಕೆ ಸರ್ಕಾರ ವಿರುದ್ಧ ಹೋರಾಡಿ: ಶಾ