‘ಜೈ ಹೋ ಮೋದಿ’ ಹಾಡು ತೋರಿಸಿದ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ಶುಕ್ರವಾರ ನಡೆದಿದೆ.
ಮೈಸೂರು : ‘ಜೈ ಹೋ ಮೋದಿ’ ಹಾಡು ತೋರಿಸಿದ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ಶುಕ್ರವಾರ ನಡೆದಿದೆ.
ಮೈಸೂರು ತಾಲೂಕು ವರುಣ ಹೋಬಳಿ ಹಳ್ಳಿಕೆರೆಹುಂಡಿ ನಿವಾಸಿ ಲಕ್ಷ್ಮೀನಾರಾಯಣ (ರೋಹಿತ್ ರಾಮನ್) ಎಂಬುವರೇ ಹಲ್ಲೆಗೊಳಗಾದವರು. ಇವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು, ಜೈ ಹೋ ಮೋದಿ ಎಂಬ ಶೀರ್ಷಿಕೆಯಲ್ಲಿ ಕನ್ನಡ ಹಾಡನ್ನು ರಚಿಸಿ, ನಿರ್ದೇಶಿಸಿ ಅದನ್ನು ಆರ್.ಆರ್. ಫಿಲಂ ಕಂಪನಿ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ವಾರದ ಹಿಂದಷ್ಟೇ ಅಪ್ ಲೋಡ್ ಮಾಡಿದ್ದರು.
ನಜರ್‌ಬಾದ್‌ನಲ್ಲಿರುವ ಸರ್ಕಾರಿ ಅತಿಥಿಗೃಹದ ಬಳಿ ಶುಕ್ರವಾರ ತಾವು ರಚಿಸಿದ್ದ ಜೈ ಹೋ ಮೋದಿ ಹಾಡಿನ ವಿಡಿಯೋವನ್ನು ಅನ್ಯಕೋಮಿನ ಅಪರಿಚಿತ ಯುವಕನಿಗೆ ತೋರಿಸಿ, ತಮ್ಮ ಚಾನಲ್ ಸಬ್‌ಸ್ಕ್ರೈಬ್ ಮಾಡಿ, ಶೇರ್ ಮಾಡುವಂತೆ ಕೇಳಿದ್ದರು. ಈ ವೇಳೆ ಸ್ನೇಹಿತರಿಗೆ ಹಾಡನ್ನು ಕೇಳಿಸೋಣ ಎಂದು ಕರೆದುಕೊಂಡು ಹೋಗಿ, ಸ್ನೇಹಿತರೊಂದಿಗೆ ಸೇರಿ ಲಕ್ಷ್ಮೀನಾರಾಯಣ ಮೇಲೆ ಹಲ್ಲೆ ಆತ ನಡೆಸಿದ್ದಾನೆ.
ಬಳಿಕ, ಲಕ್ಷ್ಮೀನಾರಾಯಣ ಅವರು ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿ, ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ತನಿಖೆಗೆ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಕರಣ ಸಂಬಂಧ ಐವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣ, ನಾನು ಮೋದಿ ಅವರ ಕುರಿತು ವಿಡಿಯೋ ಹಾಡೊಂದನ್ನು ಮಾಡಿದ್ದೇನೆ. ಕಳೆದ ವಾರವಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದೆ. ಸರ್ಕಾರಿ ಅತಿಥಿಗೃಹದ ಬಳಿ ಅಪರಿಚಿತ ವ್ಯಕ್ತಿಗೆ ಮೋದಿ ಹಾಡು ತೋರಿಸಿ ಸಬ್ ಸ್ಕ್ರೈಬ್ ಮಾಡಲು ಕೇಳಿದೆ. ಆತ ಹಾಡನ್ನು ನೋಡಿ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ಈ ಹಾಡನ್ನು ತೋರಿಸೋಣ ಬಾ ಎಂದು ಕರೆದುಕೊಂಡು ಹೋಗಿ, ಅಲ್ಲಿದ್ದ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಬಾಯಿ ಮುಚ್ಚಿ, ಥಳಿಸಿದ್ದು, ಮೋದಿ ಹಾಡು ಮಾಡುತ್ತೀಯಾ? ಪಾಕಿಸ್ತಾನ ಜಿಂದಾಬಾದ್ ಎಂದು ಕೂಗು ಎಂದು ಒತ್ತಾಯಿಸಿದ. ಒಪ್ಪದಿದ್ದಾಗ ಸಿಗರೇಟ್ ನಿಂದ ಸುಟ್ಟು, ಬಿಯರ್ ನ್ನು ನನ್ನ ಮೇಲೆ ಸುರಿದು ಅವ್ಯಾಚ ಶಬ್ದದಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.