ಮಥುರಾದಲ್ಲಿ ಹೇಮಮಾಲಿನಿಗೆ ಹ್ಯಾಟ್ರಿಕ್‌ ಕನಸು

ಸಾರಾಂಶ

ಕೃಷ್ಣನ ಜನ್ಮಕ್ಷೇತ್ರ ಉತ್ತರಪ್ರದೇಶದ ಮಥುರಾ ಕ್ಷೇತ್ರದಲ್ಲಿ ಬಾಲಿವುಡ್‌ ನಟಿ ಹೇಮಾಮಾಲಿನಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮಥುರಾ :  ಕೃಷ್ಣನ ಜನ್ಮಕ್ಷೇತ್ರ ಉತ್ತರಪ್ರದೇಶದ ಮಥುರಾ ಕ್ಷೇತ್ರದಲ್ಲಿ ಬಾಲಿವುಡ್‌ ನಟಿ ಹೇಮಾಮಾಲಿನಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ನಿಂದ ಸ್ವತಃ ರಾಜ್ಯಾಧ್ಯಕ್ಷರಾಗಿರುವ ಮುಖೇಶ್‌ ಧನಗಾರ್‌ ಸ್ಪರ್ಧೆ ಮಾಡುತ್ತಿದ್ದಾರೆ. ಇದರ ಜೊತೆಗೆ ಬಿಎಸ್‌ಪಿ ಸಹ ಸ್ಥಳೀಯ ಪ್ರಬಲ ಅಭ್ಯರ್ಥಿ ಸುರೇಶ್‌ ಸಿಂಗ್‌ರನ್ನು ಕಣಕ್ಕಿಳಿಸಿದೆ.

ಹೇಮಾಗೆ ಹ್ಯಾಟ್ರಿಕ್‌ ಕನಸು:

ಬಿಜೆಪಿಯಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಿರುವ ಹೇಮಾಮಾಲಿನಿ ಹ್ಯಾಟ್ರಿಕ್‌ ಕನಸಿನಲ್ಲಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಸ್ವತಃ ರಾಷ್ಟ್ರೀಯ ಲೋಕದಳದ ಪರಮೋಚ್ಚ ನಾಯಕ ಜಯಂತ್‌ ಯಾದವ್‌ ವಿರುದ್ಧ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ್ದ ಹೇಮಾ, 2019ರಲ್ಲೂ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದರು. ಈ ಬಾರಿಯೂ ಸಹ ತಾವು ಕೃಷ್ಣನ ಗೋಪಿಕೆಯಾಗಿದ್ದು, ಗೆದ್ದಲ್ಲಿ ಬೃಂದಾವನದಲ್ಲಿರುವ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವ ಭರವಸೆಯೊಂದಿಗೆ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಆದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.

ಹೇಗಿದೆ ಕಾಂಗ್ರೆಸ್‌ ಅಲೆ?

ಸಮಾಜವಾದಿ ಪಕ್ಷದೊಂದಿಗೆ ಕೊನೆಗೂ ಹೊಂದಾಣಿಕೆ ಮಾಡಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಇಂಡಿಯಾ ಕೂಟದಿಂದ ನಿಲ್ಲಿಸಲಾಗಿದೆ. ಅದರಲ್ಲೂ ಸ್ವತಃ ಉತ್ತರ ಪ್ರದೇಶದ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿರುವ ಮುಖೇಶ್‌ ಧನಗರ್‌ ಅವರೇ ಸ್ಪರ್ಧಿಸಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಇವರು ಕ್ಷೇತ್ರದಲ್ಲಿ ಪ್ರಬಲವಾಗಿರುವ ಗೊಲ್ಲ ಸಮುದಾಯಕ್ಕೆ ಸೇರಿದ್ದು ವರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹಾಗೆಯೇ ಕ್ಷೇತ್ರದಲ್ಲಿ ಮೈತ್ರಿ ಫಲಪ್ರದವಾದ ಬಳಿಕ ರಾಹುಲ್‌ ಹಾಗೂ ಅಖಿಲೇಶ್‌ ಅವರು ಜಂಟಿಯಾಗಿ ರೋಡ್‌ಶೋ ನಡೆಸಿರುವುದು ಕಾಂಗ್ರೆಸ್‌ ಅಭ್ಯರ್ಥಿಯ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಸ್ಪರ್ಧೆ ಹೇಗೆ?

ಹೇಮಾಮಾಲಿನಿ ಕಳೆದೆರಡು ಬಾರಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೂ ಈ ಬಾರಿ ಇಂಡಿಯಾ ಮೈತ್ರಿಕೂಟ ಒಮ್ಮತದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಸ್ಪರ್ಧೆಯ ತೀವ್ರತೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್‌ ಅಭ್ಯರ್ಥಿಗೆ ಜಾತಿಯ ಬಲವಿದ್ದರೆ, ಬಿಜೆಪಿ ಅಭ್ಯರ್ಥಿಗೆ ಎಲ್ಲ ಐದು ಶಾಸಕರ ಬಲವಿದೆ. ಹಾಗೆಯೇ ಮಥುರಾದಲ್ಲಿ ಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಕುರಿತು ವಾರಾಣಸಿ ಮಾದರಿಯಲ್ಲಿ ವಿವಾದ ಹುಟ್ಟಿಕೊಂಡಿರುವುದು ನಿರ್ಣಾಯಕವಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳು ಚದುರುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ. ಆದರೆ ಹೇಮಾಮಾಲಿನಿ ತಾನು ಕೃಷ್ಣನ ಗೋಪಿಕೆ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ.

ಸ್ಟಾರ್‌ ಕ್ಷೇತ್ರ: ಮಥುರಾ

ರಾಜ್ಯ: ಉತ್ತರ ಪ್ರದೇಶ

ಮತದಾನದ ದಿನ: ಏ.26

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿ- ಹೇಮಾಮಾಲಿನಿ

ಕಾಂಗ್ರೆಸ್‌ - ಮುಖೇಶ್‌ ಧಂಗಾರ್‌

ಬಿಎಸ್‌ಪಿ- ಸುರೇಶ್‌ ಸಿಂಗ್‌

2019ರ ಚುನಾವಣೆ ಫಲಿತಾಂಶ

ಗೆಲುವು- ಬಿಜೆಪಿ - ಹೇಮಾಮಾಲಿನಿ

ಸೋಲು- ಆರ್‌ಎಲ್‌ಡಿ - ಕುನ್ವರ್‌ ನರೇಂದ್ರ ಸಿಂಗ್‌

Share this article