ಮಾಲೀಕಯ್ಯ, ಶಾರದಾ ಶೆಟ್ಟಿ ಕಾಂಗ್ರೆಸ್ಸಿಗೆ

ಸಾರಾಂಶ

ಅಫ್ಜಲ್‌ಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಹಾಗೂ ಕುಮಟಾ ಮಾಜಿ ಶಾಸಕಿ ಶಾರದಾ ಮೋಹನ್‌ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರು :  ಅಫ್ಜಲ್‌ಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಹಾಗೂ ಕುಮಟಾ ಮಾಜಿ ಶಾಸಕಿ ಶಾರದಾ ಮೋಹನ್‌ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿಯ ಅಫ್ಜಲ್‌ಪುರದಲ್ಲಿ ಆರು ಬಾರಿ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಹಾಗೂ ಶಾರದಾ ಮೋಹನ್‌ ಶೆಟ್ಟಿ ಪಕ್ಷ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮಾಲೀಕಯ್ಯ ಗುತ್ತೇದಾರ್ ಅವರು ಬಹಳ ವರ್ಷಗಳಿಂದ ನಮ್ಮ ಜೊತೆಗಿದ್ದವರು. ಕಾರಣಾಂತರಗಳಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎಂದು ಅರಿವಾಗಿ ಮತ್ತೆ ಮರಳಿ ಬಂದಿದ್ದಾರೆ. ಈ ಹಿಂದೆ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಮಾಲೀಕಯ್ಯ ಅವರು ಪಕ್ಷದ ಅನೇಕ ಹುದ್ದೆಗಳನ್ನು ಅಲಂಕರಿಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ನಮ್ಮ ಶಾಸಕರಾದ ಎಂ.ವೈ. ಪಾಟೀಲ್ ಅವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಪಕ್ಷ ಕಟ್ಟಬೇಕು. ಕಲಬುರಗಿ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಒಂದಂಕಿ ದಾಟುವುದಿಲ್ಲ:

ಬಿಜೆಪಿ- ದಳದವರ ಮೈತ್ರಿಯನ್ನು ಅವರ ಕಾರ್ಯಕರ್ತರೇ ವಿರೋಧಿಸಿದ್ದಾರೆ. ಉತ್ತರ ಭಾರತದಲ್ಲೂ ಸಾಕಷ್ಟು ಜನ ಬಿಜೆಪಿ ತೊರೆಯುತ್ತಿದ್ದಾರೆ. 400 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಅವರಿಗೆ ಇದ್ದಿದ್ದರೆ ಇತರೇ ಪಕ್ಷಗಳ ನಾಯಕರನ್ನು ಯಾಕೆ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಎನ್‌ಡಿಎ ದೇಶದಲ್ಲಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಒಂದಂಕಿ ಸ್ಥಾನಗಳನ್ನು ಪಡೆಯುತ್ತಾರೆ ಎಂದು ಶಿವಕುಮಾರ್ ‍ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಆಮ್ ಆದ್ಮಿ ಪಕ್ಷದ ನಟರಾಜ್ ಸೇರಿದಂತೆ ಹಲವರು ಪಕ್ಷ ಸೇರ್ಪಡೆಗೊಂಡರು. ಸಚಿವ ಪ್ರಿಯಾಂಕ್‌ ಖರ್ಗೆ ಮತ್ತಿತರರು ಹಾಜರಿದ್ದರು.

Share this article