ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಚೊಂಬಿನ ತೀವ್ರ ಸಮರ

Published : Apr 20, 2024, 10:39 AM IST
congress vs bjp

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಜಾಹೀರಾತು ಪ್ರಚಾರ ಆರಂಭಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಬೆಂಗಳೂರು:  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಜಾಹೀರಾತು ಪ್ರಚಾರ ಆರಂಭಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಈ ಬಗ್ಗೆ ಶುಕ್ರವಾರ ಕಿಡಿಕಾರಿರುವ ಬಿಜೆಪಿ ನಾಯಕರು, ಗ್ಯಾರಂಟಿಗಳ ಮೂಲಕ ಜನರಿಗೆ ಟೋಪಿ ಹಾಕಿರುವ ಕಾಂಗ್ರೆಸ್‌ ಪಕ್ಷವೇ ರಾಜ್ಯದ ಜನರಿಗೆ ನಿಜವಾಗಿಯೂ ಚೊಂಬು ನೀಡಿದೆ ಎಂದು ಹೇಳಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕರು, ಚೊಂಬಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಮಾನ, ಮರ್ಯಾದೆ ಇದೆಯೇ? ಗ್ಯಾರಂಟಿಗಳ ಮೂಲಕ ಅವರೇ ರಾಜ್ಯದ ಜನರಿಗೆ ಚೊಂಬು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ. ವಿಪಕ್ಷ ನಾಯಕ ಆರ್‌.ಅಶೋಕ್‌, ‘ತಮಗೆ ಚೊಂಬು ನೀಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಜನರೂ ಚೊಂಬು ನೀಡಲಿದ್ದಾರೆ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಬಿಜೆಪಿಯವರು ನೀಡಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.

 ಗ್ಯಾರಂಟಿಯಿಂದಾಗಿ ಪ್ರತಿ ಪ್ರಜೆ ಮೇಲೆ 35 ಸಾವಿರ ರು. ಸಾಲ

  ಶಿರಾ

2006ರಲ್ಲಿ ಯಡಿಯೂರಪ್ಪ ಅವರ ಜೊತೆ ಉತ್ತಮ ಆಡಳಿತ ನೀಡಿದ್ದೇವೆ. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಒಪ್ಪಿದ್ದೆ. ಆದರೆ, ಕೆಲವರಿಂದ ಅದು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಹಸ್ತಾಂತರಿಸಿದ್ದರೆ, ಕಾಂಗ್ರೆಸ್ ನಿರ್ನಾಮ ಆಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತುಮಕೂರು ಜಿಲ್ಲೆ ಶಿರಾದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದ ಭದ್ರತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಅವಶ್ಯಕತೆಯಿದೆ ಎಂದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಿಂದಲೂ ಕೇವಲ ಗ್ಯಾರಂಟಿಗಳನ್ನು ಜನರಿಗೆ ತೋರಿಸುತ್ತಿದ್ದಾರೆ. ಈ ಯೋಜನೆಗಳಿಗಾಗಿ 1.20 ಲಕ್ಷ ಕೋಟಿ ರು. ಸಾಲ ಮಾಡಿ, ಪ್ರತಿ ಪ್ರಜೆ ಮೇಲೆ 35,000 ಸಾಲ ಹೊರೆಸಿದ್ದಾರೆ. ಇದೊಂದು ದರಿದ್ರ ಸರ್ಕಾರವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ 2000 ರು.ನೀಡಿದೆ. ಆದರೆ, ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ಅದರ ಜೊತೆಗೆ ಇತರ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸಿದೆ. ಆ ಮೂಲಕ ಇದೊಂದು ಪಿಕ್‌ ಪಾಕೆಟ್‌ ಸರ್ಕಾರವಾಗಿದೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಆದರೆ, ನಾನೆಂದೂ ಕೇಂದ್ರದ ಮುಂದೆ ಕೈಚಾಚಿಲ್ಲ ಎಂದರು.

ಚೊಂಬು ಜಾಹೀರಾತಿಗೆ ಎಚ್ಡಿಕೆ ಕಿಡಿ:

ಪತ್ರಿಕೆಯಲ್ಲಿ ಇಂದು ದೊಡ್ಡದಾಗಿ ಖಾಲಿ ಚೊಂಬಿನ ಜಾಹೀರಾತನ್ನು ರಾಜ್ಯ ಸರ್ಕಾರ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ಅನುದಾನವನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ ಎಂಬುದು ಅರ್ಥವಾಗುತ್ತದೆ. ಇದು ಕಾಂಗ್ರೆಸ್ಸಿಗರ ನಡವಳಿಕೆ, ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಅಲ್ಲಿ ಚೊಂಬಿನ ಬದಲು, ಜನರಿಂದ ತೆರಿಗೆ ರೂಪದಲ್ಲಿ ಹಣ ಲೂಟಿ ಹೊಡೆದು ಹೊತ್ತೊಯ್ಯುವ ಚಿತ್ರ ಇರಬೇಕಿತ್ತು ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ರಾಜ್ಯದಲ್ಲಿ ಇ-ವಾಹನ ಕ್ಷೇತ್ರ ಅಭಿವೃದ್ಧಿಗೆ ಒತ್ತು : ಎಚ್‌.ಡಿ. ಕುಮಾರಸ್ವಾಮಿ