ಸುಳ್ಳು ಆರೋಪ ಮಾಡಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಕೊಲ್ಲುವ ಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಮೈಸೂರು : ಸುಳ್ಳು ಆರೋಪ ಮಾಡಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಕೊಲ್ಲುವ ಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮುಖ್ಯ ಟಾರ್ಗೆಟ್ ಅಧಿಕಾರಕ್ಕೆ ಬರುವುದು. ಹೀಗಾಗಿ, ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಗಿಸಲು ಅಡ್ಡಿಯಾಗಿರುವುದು ಸಿದ್ದರಾಮಯ್ಯ. ಅದಕ್ಕಾಗಿ ಸಿದ್ದರಾಮಯ್ಯ ಟಾರ್ಗೆಟ್ ಮಾಡಲಾಗಿದೆ. ಉಪ ಚುನಾವಣೆ ನಂತರ ವಿಪಕ್ಷಗಳು ಉತ್ಸಾಹ ಕಳೆದುಕೊಂಡಿವೆ. ಆದರೂ ಅವರ ಪ್ರಯತ್ನ ನಿಲ್ಲಿಸಿಲ್ಲ. ಅಧಿಕಾರ ಪಡೆಯಲು ಎಂತಹ ಕೆಳ ಮಟ್ಟಕ್ಕೆ ಬೇಕಾದರೂ ಅವರು ಇಳಿಯುತ್ತಾರೆ. ಇಡಿ, ಸಿಬಿಐ ಮೂಲಕ ಪ್ರಯತ್ನ ಮುಂದುವರಿಸುತ್ತಾರೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಿಂದಲೇ ಮಾಡುತ್ತಿರುವ ಸಮಾವೇಶ:
ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಡಿ.5ರಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ. ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಸಮಾವೇಶ ಮೂಲಕ ವಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಲಿದ್ದಾರೆ. ಉಪ ಚುನಾವಣೆ ಫಲಿತಾಂಶದಿಂದ ಉತ್ತರ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷದಿಂದಲೇ ಮಾಡುತ್ತಿರುವ ಸಮಾವೇಶ. ಸಮಾವೇಶಕ್ಕೆ ಪಕ್ಷಕ್ಕೆ ಸಂಪೂರ್ಣ ಒಪ್ಪಿಗೆ ಇದೆ ಎಂದರು.
ಹೈಕಮಾಂಡ್‌ಗೆ ಡಿ.ಕೆ.ಶಿವಕುಮಾರ್ ಬೆಂಬಲಿಗರ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಯಾವುದೇ ಪತ್ರ ಬರೆದಿಲ್ಲ. ಇದು ನನಗೆ ಗೊತ್ತಿಲ್ಲ. ಇದು ಫೇಕ್ ಪತ್ರ ಇರಬೇಕು ಎಂದರು.
ಸಮಾವೇಶದ ಉದ್ದೇಶ ಸಿದ್ದರಾಮಯ್ಯ ಸುದೀರ್ಘ ರಾಜಕಾರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಅನ್ನುವುದನ್ನು ತಿಳಿಸುವುದು. ಸಮಾವೇಶಕ್ಕೆ 2 ಲಕ್ಷಕ್ಕೂ ಹೆಚ್ಚು ಜನರ ಸೇರುತ್ತಾರೆ ಎಂದರು.
ಆರೋಪದಲ್ಲಿ ಸತ್ಯವಿಲ್ಲ:
ಮುಡಾದಲ್ಲಿ ಕಾನೂನುಬಾಹಿರವಾಗಿ ಬದಲಿ ಭೂಮಿ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ, ತಾಯಿ, ಮಾವ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದು ತನಿಖಾ ಸಂಸ್ಥೆಗೂ ಗೊತ್ತಿದೆ. ಇಡಿಯಿಂದ ಮುಡಾ ಕ್ಲೀನ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮುಡಾವನ್ನು ಕ್ಲೀನ್ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಮುಡಾವನ್ನು ಖಂಡಿತಾ ನಾವೇ ಕ್ಲೀನ್ ಮಾಡುತ್ತೇವೆ ಎಂದರು.