ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಮತ್ತೆ ಬೆಂಬಲಿಗರ ಸಭೆ - ವೀರಶೈವ-ಲಿಂಗಾಯತರ ಸಂಕಲ್ಪ

KannadaprabhaNewsNetwork | Updated : Mar 02 2025, 04:14 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ವೀರಶೈವ-ಲಿಂಗಾಯತ ಸಮುದಾಯವನ್ನು ಸೆಳೆಯಲು ಅವರ ಬೆಂಬಲಿಗರು ಮುಂದಾಗಿದ್ದು, ಆ ಮೂಲಕ ಅದೇ ಸಮುದಾಯದ ಯತ್ನಾಳ್ ಟೀಂಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.

 ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ವೀರಶೈವ-ಲಿಂಗಾಯತ ಸಮುದಾಯವನ್ನು ಸೆಳೆಯಲು ಅವರ ಬೆಂಬಲಿಗರು ಮುಂದಾಗಿದ್ದು, ಆ ಮೂಲಕ ಅದೇ ಸಮುದಾಯದ ಯತ್ನಾಳ್ ಟೀಂಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಅದರಂಗವಾಗಿ ದಾವಣಗೆರೆಯಲ್ಲಿ ಶನಿವಾರ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ವೀರಶೈವ-ಲಿಂಗಾಯತ ಮಹಾಸಂಗಮದ ಪೂರ್ವ ಸಿದ್ಧತಾ ಸಭೆ ನಡೆಯಿತು. ಮಾ.4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ವೀರಶೈವ-ಲಿಂಗಾಯತ ಸಮಾಜದ ಬೃಹತ್‌ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆಯಿತು.

ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರವೀಂದ್ರನಾಥ, ಮಾಡಾಳ್ ವಿರುಪಾಕ್ಷಪ್ಪ, ಬಳ್ಳಾರಿ ವಿರುಪಾಕ್ಷಪ್ಪ ಸೇರಿ ವಿಜಯೇಂದ್ರ ಅವರ ಬೆಂಬಲಿಗ ನಾಯಕರು ಪಾಲ್ಗೊಂಡಿದ್ದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರ ಬಹಿರಂಗವಾಗಿಯೇ ಈ ಸಭೆ ನಡೆಸಲು ಉದ್ದೇಶಿಸಲಾಗಿತ್ತಾದರೂ, ಪಕ್ಷದ ನಾಯಕರಾರೂ ತಮ್ಮ ಪರ ಬಣ ಸಭೆ ನಡೆಸಬೇಡಿ ಎಂಬ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಸಮುದಾಯದ ಸಭೆಯನ್ನಾಗಿ ಇದನ್ನು ನಡೆಸಲಾಯಿತು. ಸಮುದಾಯ ವಿಜಯೇಂದ್ರ ಪರ ನಿಲ್ಲುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.

ರೇಣುಕಾಚಾರ್ಯ ಮಾತನಾಡಿ, ಬೆಂಗಳೂರಿನ ಸಮಾವೇಶದ ಬಗ್ಗೆ ನನಗೆ ಹಲವು ಮಠಾಧೀಶರು ವಾಟ್ಸಪ್ ಕರೆ ಮಾಡಿ, ವಿಜಯೇಂದ್ರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ನನಗೆ ಕರೆ ಮಾಡಿ, ಇಂದು ಸಮಾವೇಶ ಮಾಡಬೇಡಿ ಅಂದಿದ್ದರು. ಆದರೆ, ಇದು ಸಮಾಜದ ಒಗ್ಗಟ್ಟಿಗಾಗಿ, ಸಮಾಜದಲ್ಲಿರುವ ಭಿನ್ನಮತೀಯ ಮನಸ್ಥಿತಿ ಹೊಂದಿದವರಿಗೆ ಎಚ್ಚರಿಕೆ ನೀಡುವ ಸಮಾವೇಶ ಎಂಬುದಾಗಿ ತಿಳಿಸಿ, ಸಭೆ ನಡೆಸುತ್ತಿದ್ದೇವೆ ಎಂದರು.

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ, ರಾಜ್ಯಾದ್ಯಂತ ಬೇರು ಮಟ್ಟದಿಂದ ಪಕ್ಷ ಸಂಘಟಿಸಿದ ಯಡಿಯೂರಪ್ಪ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಸಂದೇಶ ನೀಡಲು ವೀರಶೈವ ಲಿಂಗಾಯತ ಮಹಾಸಂಗಮ ಪೂರ್ವ ಸಿದ್ಧತಾ ಸಭೆ ತೀರ್ಮಾನ ಕೈಗೊಂಡಿದೆ.

Share this article