;Resize=(412,232))
ಬೆಂಗಳೂರು : ಅರಮನೆ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶಕ್ಕೆ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಅವರಿಗೆ ಆಹ್ವಾನಿಸದಿರುವುದು ಅಹಿಂದ ಸಂಘಟನೆಯಲ್ಲಿ ಉಂಟಾದ ಒಡಕು ಎಂಬ ವ್ಯಾಖ್ಯಾನ ಈಗ ಕೇಳಿ ಬರತೊಡಗಿದೆ. ಆದರೆ, ಇದು ಅಹಿಂದ ಸಮಾವೇಶವಲ್ಲ, ಹಿಂದುಳಿದ ಜಾತಿಗಳಿಗೆ ಸೀಮಿತವಾದ ಸಮಾವೇಶ ಅಷ್ಟೇ ಎಂದು ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಮಧು ಬಂಗಾರಪ್ಪ, ಸಂತೋಷ್ ಲಾಡ್, ಬೈರತಿ ಸುರೇಶ್ ಮತ್ತಿತರ ಉಪಸ್ಥಿತಿಯಲ್ಲಿ ನಡೆದ ಸಮಾವೇಶದಲ್ಲಿ ಅಹಿಂದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರಿಗೆ ಸಮಾವೇಶಕ್ಕೆ ಆಹ್ವಾನ ನೀಡಿಲ್ಲ. ಇದು ಅಹಿಂದ ಸಂಘಟನೆಯಲ್ಲಿ ಒಡಕು ಮೂಡಿದೆ ಎಂಬುದಕ್ಕೆ ಸಾಕ್ಷಿ ಎಂಬ ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಪೂರಕವಾಗಿ ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುವ ಹೇಳಿಕೆ ನೀಡಿದ್ದರು.
ಆದರೆ ಇದು ದಲಿತ ಸಮಾವೇಶ, ಅಲ್ಪಸಂಖ್ಯಾತ ಸಮಾವೇಶದ ಮಾದರಿಯಲ್ಲಿ ನಡೆದ ಹಿಂದುಳಿದ ಜಾತಿಗಳ ಕಾರ್ಯಕ್ರಮ. ಇದಕ್ಕೂ ಅಹಿಂದ ಜಾತಿಗಳ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂಬುದು ಆಯೋಜಕರ ಅಭಿಪ್ರಾಯ.
ಸಮಾರಂಭವು ಹಿಂದುಳಿದ ವರ್ಗಗಳ ಜಾತಿಗಳಿಗೆ ಮಾತ್ರ ಸೀಮಿತವಾಗಿದ್ದು, ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗಿ ಮಾತ್ರ ಭಾಗವಹಿಸಿದ್ದರು. ಇದು ಅಹಿಂದ ಸಮಾವೇಶವಲ್ಲ, ಕೇವಲ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕ್ರಮ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಸಮಾವೇಶಗಳು ನಡೆದಂತೆ ಇದು ಹಿಂದುಳಿದ ವರ್ಗಗಳ ಕಾರ್ಯಕ್ರಮ. ಇದರಿಂದ ಅಹಿಂದ ಒಗ್ಗಟ್ಟಿಗೆ ಯಾವುದೇ ಧಕ್ಕೆ ಇಲ್ಲ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.
ಆದರೆ, ಮೂಲಗಳ ಪ್ರಕಾರ ಹಿಂದುಳಿದ ವರ್ಗದ ಎರಡನೇ ಹಂತದ ನಾಯಕರಿಗೆ ಶಕ್ತಿ ತುಂಬಲು ಕಾರ್ಯಕ್ರಮ ನಡೆಸಲಾಗಿತ್ತು ಎನ್ನಲಾಗಿದೆ. ಸಂತೋಷ್ ಲಾಡ್, ಮಧುಬಂಗಾರಪ್ಪ, ಅಜಯ್ ಸಿಂಗ್‌ರಂಥವರಿಗೆ ಶಕ್ತಿ ತುಂಬಲು ವೇದಿಕೆಯನ್ನಾಗಿ ಕಾರ್ಯಕ್ರಮ ನಡೆಸಲಾಗಿತ್ತು. ಹೀಗಾಗಿಯೇ ಮೊದಲ ಹಂತದ ಅಹಿಂದ ನಾಯಕರಿಗೆ ಆಹ್ವಾನ ಇರಲಿಲ್ಲ ಎಂದು ಹೇಳಲಾಗಿದೆ.
ಓಬಿಸಿ ಸಮಾವೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಹಿಂದುಳಿದ ವರ್ಗಗಳ ಸಮಾವೇಶ ವಿಚಾರ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಅಹಿಂದ ಯಾರ ಆಸ್ತಿಯೂ ಅಲ್ಲ. ಜನ ಮೆಚ್ಚುವವರು ಅಹಿಂದ ಲೀಡರ್ ಆಗುತ್ತಾರೆ. ಸಮಾವೇಶಕ್ಕೆ ನನ್ನನ್ನು ಕರೆದಿಲ್ಲ, ಹೀಗಾಗಿ ಹೋಗಿಲ್ಲ. ಯಾಕೆ ಕರೆದಿಲ್ಲ ಎಂಬುದನ್ನು ಆಯೋಕರನ್ನೇ ಕೇಳಿ. ಸಮಾವೇಶ ಅಹಿಂದ ಒಗ್ಗಟ್ಟಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ ಎಂದು ಹೇಳಿದ್ದರು.
ಭಾನುವಾರ ಬೆಂಗಳೂರಲ್ಲಿ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಮಟ್ಟದ ಬೃಹತ್ ಸಮಾವೇಶ
ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಂ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಬೈರತಿ ಭಾಗಿ
ಕಾರ್ಯಕ್ರಮಕ್ಕೆ ಅಹಿಂದ ನಾಯಕರಾದ ಸತೀಶ್ ಜಾರಕಿಹೊಳಿ, ಮಹದೇವಪಕ್ಕೆ ಆಹ್ವಾನವೇ ಇರಲಿಲ್ಲ
ಆಹ್ವಾನ ನೀಡದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಜಾರಕಿಹೊಳೆ, ಮಹದೇವಪ್ಪ
ಆದರೆ ಇದು ಅಹಿಂದ ಸಮಾವೇಶ ಅಲ್ಲ, ಕೇವಲ ಹಿಂದುಳಿದ ವರ್ಗಗಳ ಸಮಾವೇಶ ಎಂದ ಆಯೋಜಕರು