;Resize=(412,232))
ಬೆಂಗಳೂರು : ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಬಹುತೇಕ ಅಖೈರುಗೊಂಡಿದ್ದು, ಭಾನುವಾರ ಬೆಳಗ್ಗೆ ಅಧಿಕೃತ ಘೋಷಣೆಯಾಗಲಿದೆ. ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಎರಡೂ ಕ್ಷೇತ್ರಗಳ ಟಿಕೆಟ್ ಅನ್ನು ಶನಿವಾರ ದಿನವಿಡೀ ನಡೆದ ಸರಣಿ ಸಭೆಗಳ ಬಳಿಕ ಅಂತಿಮಗೊಳಿಸಲಾಗಿದೆ.
ಮೂಲಗಳ ಪ್ರಕಾರ ಅಲ್ಪಸಂಖ್ಯಾತರ ತೀವ್ರ ವಿರೋಧದ ನಡುವೆಯೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಬಹುತೇಕ ನಿಕ್ಕಿಯಾಗಿದೆ. ಇನ್ನು ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ.ಮೇಟಿ ಅವರ ಕಿರಿಯ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಪುತ್ರರಾದ ಮಲ್ಲಿಕಾರ್ಜುನ ಹಾಗೂ ಉಮೇಶ್ ಅವರ ನಡುವೆ ತೀವ್ರ ಸ್ಪರ್ಧೆ ಇತ್ತು. ಆದರೆ, ಉಮೇಶ್ ಅವರಿಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಬಲ ಇದೆ. ಜತೆಗೆ ಉತ್ತಮ ನಾಯಕತ್ವ ಗುಣ ಇದೆ ಎಂದು ಗುರುತಿಸಿ ಉಮೇಶ್ ಅವರಿಗೆ ಟಿಕೆಟ್ ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿತ್ತು. ಅಲ್ಪಸಂಖ್ಯಾತರ ಬಲ ಹೆಚ್ಚಾಗಿರುವ ಕ್ಷೇತ್ರದಲ್ಲಿ ಶತಾಯಗತಾಯ ನಮಗೇ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತರು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಸಮರ್ಥ್ ಶಾಮನೂರು ಬಿ-ಫಾರಂ ಇಲ್ಲದೆಯೇ ನಾಮಪತ್ರವನ್ನೂ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಾಧಿಕ್ ಪೈಲ್ವಾನ್ ಎಂಬುವವರೂ ನಾಮಪತ್ರ ಸಲ್ಲಿಸಿದ್ದರು. ಇದು ಶಾಮನೂರು ಕುಟುಂಬ ಹಾಗೂ ಅಲ್ಪಸಂಖ್ಯಾತರ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿತ್ತು.
ಈ ತಿಕ್ಕಾಟ ಬಗೆಹರಿಸಲು ಶುಕ್ರವಾರ ಕಸರತ್ತು ನಡೆಸಿದ ಕಾಂಗ್ರೆಸ್ ನಾಯಕರು ಶನಿವಾರವೂ ಸರಣಿ ಸಭೆ ನಡೆಸಿದರು. ಅಂತಿಮವಾಗಿ ಶನಿವಾರ ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಸಭೆ ನಡೆಸಿ ಮನವೊಲಿಸಲಾಯಿತು ಎಂದು ತಿಳಿದುಬಂದಿದೆ.
ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಟಿಕೆಟ್ ನೀಡುವುದು ರೂಢಿ. ಬಾಗಲಕೋಟೆಯಲ್ಲೂ ಎಚ್.ವೈ. ಮೇಟಿ ಪುತ್ರನಿಗೆ ಟಿಕೆಟ್ ಬಹುತೇಕ ಅಂತಿಮವಾಗಿದೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಿಗೆ ಟಿಕೆಟ್ ನೀಡಬೇಕು. ಇದಕ್ಕೆ ನೀವೆಲ್ಲಾ ಸಹಕರಿಸಬೇಕು ಎಂದು ಅಲ್ಪಸಂಖ್ಯಾತ ನಾಯಕರ ಮನವೊಲಿಸಿದರು ಎಂದು ತಿಳಿದುಬಂದಿದೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ನ್ಯಾಯಯುತ ಬೇಡಿಕೆ ಆದರೂ ದಶಕಗಳಿಂದ ಶಾಮನೂರು ಅವರು ಪಕ್ಷಕ್ಕೆ ಸೇವೆ ಮಾಡಿದ್ದಾರೆ. ದೇಶದ ಅತಿ ಹಿರಿಯ ಶಾಸಕರಾಗಿದ್ದ ಶಾಮನೂರು ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಕುಟುಂಬದವರಿಗೆ ಟಿಕೆಟ್ ನೀಡುವುದು ಗೌರವ. ಮುಂದಿನದ್ದನ್ನು ಎರಡೂವರೆ ವರ್ಷದ ಬಳಿಕ ನೋಡೋಣ. ಸದ್ಯಕ್ಕೆ ಎಲ್ಲರೂ ಒಟ್ಟಾಗಿ ಚುನಾವಣೆ ನಡೆಸಿ ಎಂದು ತಿಳಿ ಹೇಳಿದರು ಎನ್ನಲಾಗಿದೆ.
ಸಭೆಯಲ್ಲಿ ಸಚಿವರಾದ ಮಲ್ಲಿಕಾರ್ಜುನ, ಬೈರತಿ ಸುರೇಶ್, ಜಮೀರ್ ಅಹಮದ್, ಸಂಸದ ನಾಸೀರ್ ಹುಸೇನ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಹ್ಯಾರೀಸ್, ರಿಜ್ವಾನ್ ಹರ್ಷದ್ ಹಾಜರಿದ್ದರು ಎಂದು ತಿಳಿದುಬಂದಿದೆ.
ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಅಂತಿಮ ದಿನ ಆಗಿರುವುದರಿಂದ ಭಾನುವಾರ ಅಥವಾ ಸೋಮವಾರ ಎರಡೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
- ದಾವಣಗೆರೆ ದಕ್ಷಿಣ ಕೈ ಟಿಕೆಟ್‌ಗೆ ತೀವ್ರ ಪೈಪೋಟಿ
- ಈ ಬಾರಿ ನಮಗೇ ಕೊಡಿ ಎಂದ ಅಲ್ಪಸಂಖ್ಯಾತರು
- ಎರಡೂವರೆ ವರ್ಷ ಬಳಿಕ ನೋಡುವ ಎಂದ ವರಿಷ್ಠರು
- ವರಿಷ್ಠರ ಮನವೊಲಿಕೆಗೆ ಪಟ್ಟು ಸಡಿಲಿಸಿದ ಮುಖಂಡರು
- ಶಾಮನೂರು ಮೊಮ್ಮಗನಿಗೆ ಕೊನೆಗೂ ಟಿಕೆಟ್ ಪಕ್ಕಾ
ನಾಳೆ ಬಿಜೆಪಿ, ಕಾಂಗ್ರೆಸ್ ನಾಮಪತ್ರ ಶಕ್ತಿ ಪ್ರದರ್ಶನ
ದಾವಣಗೆರೆ/ಬಾಗಲಕೋಟೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಎರಡೂ ಪಕ್ಷಗಳ ಅಭ್ಯರ್ಥಿಗಳು 2 ದಿನ ಹಿಂದೆಯೇ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಧಿಕೃತವಾಗಿ ಬಿ-ಫಾರಂ ಸಮೇತ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಎಲ್ಲ ಪಕ್ಷಗಳ ನಾಯಕರು ಉಭಯ ನಗರಗಳಲ್ಲಿ ಅಭ್ಯರ್ಥಿಗಳಿಗೆ ಸಾಥ್ ನೀಡಲಿದ್ದಾರೆ.