ಬೈರತಿ-ಮಹದೇವಪ್ಪ ನಡುವೆ ಸರ್ಕಾರಿ ನಿವಾಸಕ್ಕಾಗಿ ಸಮರ

Published : Sep 08, 2026, 08:02 AM IST
HC Mahadevappa

ಸಾರಾಂಶ

ಸರ್ಕಾರಿ ಅಧಿಕೃತ ನಿವಾಸಕ್ಕಾಗಿ ಹಾಲಿ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ನಡುವೆ ಜಟಾಪಟಿ ನಡೆದಿದ್ದು, ಸಚಿವ ಸ್ಥಾನದ ಅವಧಿ ಮುಗಿದು 90 ದಿನ ಕಳೆದರೂ ಮಹದೇವಪ್ಪ ಅವರು ನಿವಾಸ ಖಾಲಿ ಮಾಡದಿರುವುದು ಹಾಗೂ ಖಾಲಿ ಮಾಡುವ ಮುನ್ನವೇ ಲೋಕೋಪಯೋಗಿ ಇಲಾಖೆ ಮನೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ.

ಬೆಂಗಳೂರು : ಸರ್ಕಾರಿ ಅಧಿಕೃತ ನಿವಾಸಕ್ಕಾಗಿ ಹಾಲಿ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ನಡುವೆ ಜಟಾಪಟಿ ನಡೆದಿದ್ದು, ಸಚಿವ ಸ್ಥಾನದ ಅವಧಿ ಮುಗಿದು 90 ದಿನ ಕಳೆದರೂ ಮಹದೇವಪ್ಪ ಅವರು ನಿವಾಸ ಖಾಲಿ ಮಾಡದಿರುವುದು ಹಾಗೂ ಖಾಲಿ ಮಾಡುವ ಮುನ್ನವೇ ಲೋಕೋಪಯೋಗಿ ಇಲಾಖೆ ಮನೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆ ದುರಸ್ತಿ ಕಾಮಗಾರಿ ನಡೆಸಲು ಸಚಿವ ಬೈರತಿ ಸುರೇಶ್‌ ಸೂಚನೆ ಕಾರಣ ಎಂಬುದು ಮಹದೇವಪ್ಪ ಅವರ ಆರೋಪ.

ನಿಯಮಗಳ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡು ಮಾಜಿ ಆದವರು 90 ದಿನಗಳ ಒಳಗಾಗಿ ಅಧಿಕೃತ ನಿವಾಸ ಖಾಲಿ ಮಾಡಬೇಕು. ಆದರೆ, ಸಚಿವ ಸ್ಥಾನದಿಂದ ಕೆಳಗಿಳಿದು 100 ದಿನ ಸಮೀಪಿಸುತ್ತಿದ್ದರೂ ಮಹದೇವಪ್ಪ ನಿವಾಸ ಖಾಲಿ ಮಾಡಿಲ್ಲ. ಇನ್ನು ಜೂ.3 ರಂದು ಮತ್ತೆ ಸಚಿವರಾಗಿ ಪದಗ್ರಹಣ ಮಾಡಿದ ಸಚಿವ ಬೈರತಿ ಸುರೇಶ್‌ ಅವರಿಗೆ 90 ದಿನ ಕಳೆದರೂ ನಿವಾಸ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ಮಹದೇವಪ್ಪ ಅವರು ಮನೆಯಲ್ಲಿರುವಾಗಲೇ ರಿಪೇರಿ ಕಾಮಗಾರಿ ಶುರು ಮಾಡಿದ್ದು, ಇದು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌:

ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದ ಡಾ.ಮಹದೇವಪ್ಪ, ಸಾರ್ವಜನಿಕ ಜೀವನದಲ್ಲಿ ಸೌಜನ್ಯ ಎಂಬುದು ಬಹಳ ಮುಖ್ಯ. ಸಚಿವ ಸ್ಥಾನ ಹೋದ ಮೇಲೂ ಮನೆ ಖಾಲಿ ಮಾಡಲು 90 ದಿನ ಕಾಲಾವಕಾಶ ಇರುತ್ತದೆ. ಬೈರತಿ ಸುರೇಶ್‌ ಕನಿಷ್ಠ ಸೌಜನ್ಯ ತೋರಿಸದೆ ನಾನು ಮನೆಯಲ್ಲಿರುವಾಗಲೇ ಮೀಟಿಂಗ್‌ ಹಾಲ್‌ ಕೆಡವಿದ್ದಾರೆ. ನಾನು ಮನೆ ಖಾಲಿ ಮಾಡುವ ಮೊದಲೇ ಮೀಟಿಂಗ್‌ ಹಾಲ್‌ ಕೆಡವುಹುದು, ಸಿಬ್ಬಂದಿ ಮೂಲಕ ಮನೆ ಸದಸ್ಯರಿಗೆ ಸೂಚನೆ ಕೊಡಿಸುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ತಾಳ್ಮೆ ಇರಲಿ’ ಎಂದು ಹೇಳಿದ್ದಾರೆ.

ಈ ನಡುವೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೈರತಿ ಸುರೇಶ್ ಅವರಿಗೆ ತೊಂದರೆ ಇರುವುದರಿಂದಲೇ ಬೇಗ ಖಾಲಿ ಮಾಡಲು ಒತ್ತಾಯಿಸುತ್ತಿರಬಹುದು, ಇದರಲ್ಲಿ ಅವರ ತಪ್ಪೇನೂ ಇಲ್ಲ. ನನಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲದಿರುವುದರಿಂದ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಸೂಕ್ತ ಮನೆ ಅಂತಿಮವಾದ ತಕ್ಷಣ ಬಂಗಲೆ ಖಾಲಿ ಮಾಡುತ್ತೇನೆ’ ಎಂದರು.

ಹತಾಶೆಯಿಂದ ಆರೋಪ-ಬೈರತಿ:

ಇದಕ್ಕೆ ತಿರುಗೇಟು ನೀಡಿರುವ ಸಚಿವ ಬೈರತಿ ಸುರೇಶ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಾನು ದೂರದಿಂದ ಬರಬೇಕು ಎಂಬ ಕಾರಣಕ್ಕೆ ತಮ್ಮ ವಿವೇಚನೆ ಅಡಿ ನಿವಾಸ ಹಂಚಿಕೆ ಮಾಡಿದ್ದರು. ಯಾರೇ ಆಗಲಿ ಸಚಿವರಾದ ಬಳಿಕ ಮೂರು ತಿಂಗಳವರೆಗೆ ಇರಲು ಅವಕಾಶವಿದೆ. ಮಹದೇವಪ್ಪ ಅವರು ಅಲ್ಲೇ ಇರಬೇಕು ಎಂದರೂ ನನ್ನದೇನೂ ಅಭ್ಯಂತರವಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಷ್ಟು ದಿನವಾದರೂ ಇರಲಿ. ಆದರೆ, ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

‘ಮನೆ ಖಾಲಿ ಮಾಡುವಂತೆ ನಾನು ಹೇಳಿಲ್ಲ. ಅಲ್ಲಿ ನಡೆದಿರುವ ಯಾವ ವಿದ್ಯಮಾನಗಳೂ ನನಗೆ ಗೊತ್ತಿಲ್ಲ. ಅವರು ಯಾವುದೋ ಹತಾಶೆಯನ್ನು ನನ್ನ ಮೇಲೆ ಹಾಕುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಇನ್ನು ನಿವಾಸದಲ್ಲಿನ ಮೀಟಿಂಗ್ ಶೆಡ್ ಹೊಡೆದಿರುವುದಕ್ಕೂ ನನಗೂ ಸಂಬಂಧವಿಲ್ಲ. ಲೋಕೋಪಯೋಗಿ ಇಲಾಖೆಯವರು ಹೊಡೆದಿದ್ದಾರೆ. ಕೊರೋನಾ ಸಮಯದಲ್ಲಿ ಗೋವಿಂದ ಕಾರಜೋಳ ಅವರು ಸುರಕ್ಷತೆ ದೃಷ್ಟಿಯಿಂದ ಜನ ಕೂರಲು ಮೀಟಿಂಗ್‌ ಶೆಡ್ ಮಾಡಿಸಿದ್ದರು. ಅದು ಅಗತ್ಯವಿಲ್ಲ ಎಂದು ಈಗ ಕೆಡವಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸಂಪುಟ ಪುನರ್‌ರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡಿದ್ದ ಮಹದೇವಪ್ಪ

ಹೀಗಾಗಿ 90 ದಿನದೊಳಗೆ ಸರ್ಕಾರಿ ನಿವಾಸ ತೆರವು ಮಾಡಬೇಕಿತ್ತು. ಆದ್ರೆ ಮಾಡಿಲ್ಲ

ಪರಿಣಾಮ ಮಹದೇವಪ್ಪ ಮನೆ ಖಾಲಿಗೆ ಮುನ್ನವೇ ಅಲ್ಲಿ ದುರಸ್ತಿ ಆರಂಭಿಸಿದ ಇಲಾಖೆ

ಅಧಿಕಾರ ಶಾಶ್ವತವಲ್ಲ, ಸ್ವಲ್ಪ ತಾಳ್ಮೆ ಇರಲಿ: ಸಚಿವ ಬೈರತಿಗೆ ಮಹದೇವಪ್ಪ ಟಾಂಗ್‌

ಮನೆ ಖಾಲಿ ಮಾಡಲು ನಾನು ಹೇಳಿಲ್ಲ, ಆ ವಿದ್ಯಮಾನಕ್ಕೂ ನನಗೂ ಸಂಬಂಧವಿಲ್ಲ: ಬೈರತಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

16745 ಕೋಟಿ ರು. ತಲುಪಿದ ಮೇಕೆದಾಟು ಯೋಜನಾ ವೆಚ್ಚ
ವಾಲ್ಮೀಕಿ ಹಗರಣ: 5 ತಾಸು ನಾಗೇಂದ್ರಗೆ ಇಡಿ ವಿಚಾರಣೆ