ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸೋಮವಾರ ಐದು ತಾಸು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸೋಮವಾರ ಐದು ತಾಸು ವಿಚಾರಣೆ ನಡೆಸಿದ್ದಾರೆ.

ಇ.ಡಿ. ಸಮನ್ಸ್‌ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಇ.ಡಿ. ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಈಗಾಗಲೇ ತನಿಖೆ ನಡೆಸಿ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಹೆಚ್ಚಿನ ತನಿಖೆ ಭಾಗವಾಗಿ ಪ್ರಕರಣದ 1ನೇ ಆರೋಪಿಯಾಗಿರುವ ನಾಗೇಂದ್ರ ಅವರನ್ನು ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಕೆಲ ಸ್ಪಷ್ಟನೆ ಕೇಳಲು ಕಳೆದ ಬಾರಿ ಸಮನ್ಸ್‌ ನೀಡಿದ್ದರು

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, ಪ್ರಕರಣ ಸಂಬಂಧ ಕೆಲ ಸ್ಪಷ್ಟನೆ ಕೇಳಲು ಕಳೆದ ಬಾರಿ ಸಮನ್ಸ್‌ ನೀಡಿದ್ದರು. ಆಗ ವಿಚಾರಣೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ ಇ.ಡಿ ಅಧಿಕಾರಿಗಳ ಎದುರು ಹಾಜರಾಗಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೊಮ್ಮೆ ಕರೆದರೂ ಬರುತ್ತೇನೆ ಎಂದು ಹೇಳಿದ್ದೇನೆ.

ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಸಾವಿರ ಪರ್ಸೆಂಟ್‌ ಹೇಳುತ್ತೇನೆ. ಇದು ಯೂನಿಯನ್‌ ಬ್ಯಾಂಕಿನವರು ಮಾಡಿದ ವಂಚನೆ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಿದ್ದರು. ಇ.ಡಿ ಅಧಿಕಾರಿಗಳ ಕೇಳಿದ ಪ್ರಶ್ನೆಗಳಿಗೆ ಕೆಲ ಸ್ಪಷ್ಟನೆ ನೀಡಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇ.ಡಿ.ಅಧಿಕಾರಿಗಳು ಈ ಹಿಂದೆ ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈ ವಂಚನೆ ಪ್ರಕರಣ ಸಂಬಂಧ ಸಿಬಿಐ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿಯೂ ಬಿ.ನಾಗೇಂದ್ರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

- 24 ಪ್ರತಿಭೆಗಳಿಗೆ ಅನ್ಯಾಯ ಆಗಿದೆ. ಹೀಗಾದರೆ ಹಗಲು ರಾತ್ರಿ ಓದಿದವರ ಕಥೆ ಏನು

- ವಾಲ್ಮೀಕಿ ನಿಗಮದ ₹187 ಕೋಟಿ ಹಗರಣದಲ್ಲಿ ಈ ಹಿಂದೆ ನಾಗೇಂದ್ರ ಬಂಧನ ಆಗಿತ್ತು

- ಇತ್ತೀಚೆಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಜೈಲಿಂದ ಬಿಡುಗಡೆಯಾಗಿದ್ದ ಕಾಂಗ್ರೆಸ್‌ ಶಾಸಕ

- ಇದೀಗ ಹೆಚ್ಚಿನ ತನಿಖೆ ಭಾಗವಾಗಿ ಮತ್ತೆ ನೋಟಿಸ್‌. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಭಾಗಿ

- ನನ್ನದೇನೂ ತಪ್ಪಿಲ್ಲ. ಇದೆಲ್ಲಾ ಬ್ಯಾಂಕ್‌ನ. ನನ್ನ ವಿರುದ್ಧದ ಆರೋಪ ಕೇವಲ ರಾಜಕೀಯ ಷಡ್ಯಂತ್ರ ಎಂದ ಮಾಜಿ ಸಚಿವ