ಸಂಸತ್ತಲ್ಲಿಯೂ ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪ

| Published : Jul 23 2024, 12:31 AM IST / Updated: Jul 23 2024, 07:16 AM IST

Vishweshwar hegde kageri

ಸಾರಾಂಶ

ವಿಧಾನಮಂಡಲ ಅಧಿವೇಶನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ.

 ನವದೆಹಲಿ :  ವಿಧಾನಮಂಡಲ ಅಧಿವೇಶನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಈ ಹಗರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಈ ವಿಚಾರ ಪ್ರಸ್ತಾಪಿಸಿದ ಅವರು, ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಐಟಿ-ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಜಗತ್ತಿನಲ್ಲಿಯೇ ಮುಂದಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಾತ್ಮಕವಾಗಿ ಹಲವು ಸಮಸ್ಯೆಗಳಿವೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಅವ್ಯವಹಾರ ನಡೆದಿದ್ದು, ನಿಗಮದ ಖಜಾನೆ ಮೂಲಕ ಹಲವು ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇದು ಜನರ ತೆರಿಗೆ ಹಣವಾಗಿದ್ದು, ಪರಿಶಿಷ್ಟ ವರ್ಗದ ಸಮುದಾಯಕ್ಕೆ ಮೀಸಲಿಡಲಾಗಿತ್ತು. ಸದ್ಯ ನಿಗಮದ ಹಣ ದುರ್ಬಳಕೆ ಆಗಿದ್ದು, ಆ ಸಮುದಾಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.

ಸ್ವತಃ ಕರ್ನಾಟಕದಲ್ಲಿ ಮುಖ್ಯಮಂತ್ರಿ ಅವರೇ ಹಣಕಾಸು ಸಚಿವರಾಗಿದ್ದು, ಈ ಹಗರಣದ ವಿಚಾರದಲ್ಲಿ ಆಡಳಿತ ಯಂತ್ರದ ದುರುಪಯೋಗವಾಗಿದೆ. ಕೇಂದ್ರ ಸರ್ಕಾರ ಈ ಸಂಬಂಧ ಸರಿಯಾದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.