ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರು. ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.ಇ.ಡಿ.ಯಿಂದ ಬುಧವಾರದಿಂದ ಆರಂಭಗೊಂಡ ಶೋಧ, ವಿಚಾರಣೆ ಪ್ರಕ್ರಿಯೆ ಶುಕ್ರವಾರದವರೆಗೆ ಮುಂದುವರೆಯಿತು. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಾಗೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಡಾಲರ್ಸ್ ಕಾಲೋನಿ ನಿವಾಸದಿಂದ ಶಾಂತಿನಗರದ ಕಚೇರಿಗೆ ಕರೆದೊಯ್ದು ಸುದೀರ್ಘವಾಗಿ ಬಹುಕೋಟಿ ಅಕ್ರಮದ ಕುರಿತು ಪ್ರಶ್ನಿಸಿದರು. ಮತ್ತಷ್ಟು ವಿಚಾರಣೆ ನಡೆಸಬೇಕಾದ ಅಗತ್ಯ ಇರುವ ಕಾರಣ ಇ.ಡಿ. ಅಧಿಕಾರಿಗಳು ರಾತ್ರಿ ಬಂಧಿಸಿದರು.
ರಾತ್ರಿ 8 ಗಂಟೆಯ ಸುಮಾರಿಗೆ ನಾಗೇಂದ್ರ ಅವರನ್ನು ಬಂಧಿಸಿದ ಇ.ಡಿ. ಅಧಿಕಾರಿಗಳು ರಾತ್ರಿ 9 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರಮಂಗಲದಲ್ಲಿನ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಿದರು.10 ತಾಸು ವಿಚಾರಣೆ:
ಶುಕ್ರವಾರ ಬೆಳಗ್ಗೆ ಡಾಲರ್ಸ್ ಕಾಲೋನಿ ನಿವಾಸದಿಂದ ಇ.ಡಿ. ಕಚೇರಿಗೆ ನಾಗೇಂದ್ರ ಅವರನ್ನು ಕರೆತಂದ ಇ.ಡಿ. ಅಧಿಕಾರಿಗಳು, ಸತತ 10 ಗಂಟೆ ಕಾಲ ವಿಚಾರಣೆ ನಡೆಸಿದರು. ಈ ವೇಳೆ ಎರಡು ದಿನಗಳ ಕಾಲ ನಡೆಸಿದ ಶೋಧ ಕಾರ್ಯ, ಹಲವರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ನಾಗೇಂದ್ರ ಅವರನ್ನು ತೀವ್ರ ವಿಚಾರಣೆ ನಡೆಸಲಾಯಿತು. ಅವರ ಆಪ್ತರು, ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಲಭ್ಯವಾದ ಮಾಹಿತಿ ಆಧಾರದ ಮೇಲೆ ಪ್ರಶ್ನಿಸಲಾಯಿತು. ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ಸಿಗದಿದ್ದರಿಂದ ಬಂಧನಕ್ಕೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.ಬುಧವಾರ ಮತ್ತು ಗುರುವಾರ ಇ.ಡಿ. ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ರಾಯಚೂರು ಮತ್ತು ಹೈದರಾಬಾದ್‌ನಲ್ಲಿ ಒಟ್ಟು 18 ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ನಾಗೇಂದ್ರ ಅವರ ಬೆಂಗಳೂರು, ಬಳ್ಳಾರಿಯಲ್ಲಿರುವ ನಿವಾಸ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ರಾಯಚೂರು, ಬೆಂಗಳೂರಿನಲ್ಲಿನ ನಿವಾಸ ಮತ್ತು ನಾಗೇಂದ್ರ, ದದ್ದಲ್ ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಬೆಂಗಳೂರಿನ ವಸಂತನಗರದಲ್ಲಿನ ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿಯಲ್ಲಿಯೂ ತಪಾಸಣೆ ನಡೆಸಿದ್ದರು. ಯೂನಿಯನ್ ಬ್ಯಾಂಕ್ ಸಿಬ್ಬಂದಿ ನಿವಾಸ, ಕಚೇರಿಯಲ್ಲಿಯೂ ಶೋಧ ಕಾರ್ಯ ಕೈಗೊಂಡಿದ್ದರು.
ನಾಗೇಂದ್ರ ಆಪ್ತ ಸಹಾಯಕ ಹರೀಶ್‌ನನ್ನು ಎರಡು ದಿನಗಳ ಕಾಲ ಸತತವಾಗಿ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಅಲ್ಲದೇ, ಬುಧವಾರ ಬಳ್ಳಾರಿಯಲ್ಲಿ ನಾಗೇಂದ್ರ ಅವರ ಆಪ್ತ ಸಹಾಯಕರಾದ ವಿಜಯ್‌ಕುಮಾರ್ ಮತ್ತು ಚೇತನ್ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದರು. ಇನ್ನು, ಗುರುವಾರ ಬಸನಗೌಡ ದದ್ದಲ್ ಅವರ ಆಪ್ತ ಎನ್ನಲಾದ ಪಂಪಣ್ಣ ಎಂಬಾತನನ್ನು ಸಹ ರಾಯಚೂರಿನಲ್ಲಿ ತೀವ್ರ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಸತತ ಎರಡು ದಿನಗಳ ಕಾಲ ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿ ಅಧಿಕಾರಿಗಳು, ಸಿಬ್ಬಂದಿಯಿಂದಲೂ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು. ನಿಗಮದ ವ್ಯವಹಾರದ ಕುರಿತು ಲೆಕ್ಕಪರಿಶೋಧಕರಿಂದ ಮಾಹಿತಿ ಪಡೆದುಕೊಂಡು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.ನಿಗಮದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳ ಮುಂದೆ ದಾಖಲೆಯನ್ನಿಟ್ಟು ಪ್ರಶ್ನಿಸಿದ್ದರು. ಬ್ಯಾಂಕ್ ದಾಖಲೆಗಳ ಸಮೇತ ಪ್ರಶ್ನಿಸಿದರೂ ಸರಿಯಾದ ಉತ್ತರ ನೀಡದ ಕಾರಣ ಗುರುವಾರ ಬ್ಯಾಂಕ್‌ನ ಅಧಿಕಾರಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.ಪ್ರಕರಣ ಸಂಬಂಧ ಎರಡು ದಿನಗಳ ಕಾಲ ನಡೆಸಿದ ಪ್ರತಿ ವಿಚಾರಣೆಯಲ್ಲಿಯೂ ನಾಗೇಂದ್ರ ಪಾತ್ರದ ಕುರಿತು ಮಾಹಿತಿ ಲಭ್ಯವಾಗಿದೆ. ಈ ಕಾರಣದಿಂದಾಗಿ ವಶಕ್ಕೆ ಪಡೆದುಕೊಳ್ಳಲಾಯಿತು. ಸತತ ವಿಚಾರಣೆ ಬಳಿಕ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡರು. ಇದೀಗ ಇ.ಡಿ. ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.