ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವ ಜೊತೆ ಕಾನೂನು ಹೋರಾಟಕ್ಕೆ ‘ಬೆಂಗಳೂರು ಟೌನ್‌ಹಾಲ್ ಸಂಘಟನೆ’ ತೀರ್ಮಾನಿಸಿದೆ.
ನಟ ಹಾಗೂ ಚಿಂತಕ ಪ್ರಕಾಶ್ ಬೆಳವಾಡಿ ನೇತೃತ್ವದ ಬೆಂಗಳೂರು ಟೌನ್‌ಹಾಲ್ ಸಂಘಟನೆ ಶನಿವಾರ ಸಭೆ ನಡೆಸಿತು. ಸಭೆಯಲ್ಲಿ ವಿಧಾನಮಂಡಲದಲ್ಲಿ ಅನುಮೋದನೆಯೊಂಡ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ, ಸುರಂಗ ರಸ್ತೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದೆ.
ಭಾನುವಾರ ಅಥವಾ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಅನುಮೋದನೆ ನೀಡಬಾರದು. ವಿಧೇಯಕವನ್ನು ಮರು ಪರಿಶೀಲನೆಗೆ ಸರ್ಕಾರಕ್ಕೆ ವಾಪಾಸ್ ಕಳುಹಿಸಿಕೊಡಬೇಕು. ಮರು ಪರಿಶೀಲನೆಗೆ ಯಾವ ಅಂಶಗಳಡಿ ಕಳುಹಿಸಿಕೊಡಬೇಕೆಂಬ ಮಾಹಿತಿ ಒಳಗೊಂಡ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ.
ವಿಧೇಯಕದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು. ಜತೆಗೆ, ಸುರಂಗ ರಸ್ತೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಆಯಾ ಕ್ಷೇತ್ರದಲ್ಲಿ ಪರಿಣತಿ ಇರುವ 4 ತಂಡಗಳನ್ನು ರಚನೆ ಮಾಡುವುದು. ಅವರುಗಳು ಹೈಕೋರ್ಟ್, ರಾಷ್ಟ್ರೀಯ ಹಸಿರು ಪೀಠ ಸೇರಿದಂತೆ ಮೊದಲಾದ ಕಾನೂನು ಹೋರಾಟ ನಡೆಸಬೇಕು. ವಿಧೇಯಕ, ಸುರಂಗ ರಸ್ತೆ ಕುರಿತು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸುಪ್ರೀಂ ಕೋರ್ಟ್‌ಗೂ ಅರ್ಜಿ:
ವಿಧೇಯಕದ ವಿರುದ್ಧ ಸುಪ್ರೀಂ ಕೋರ್ಟ್ ಸಂವಿಧಾನಾತ್ಮಕ ಪೀಠಕ್ಕೆ ಅರ್ಜಿ ಸಲ್ಲಿಸುವ ಜೊತೆಗೆ ಇಡೀ ದೇಶಕ್ಕೆ ಅನ್ವಯವಾಗುವಂತೆ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡುವಂತೆ ಕೋರಲು ತೀರ್ಮಾನಿಸಲಾಗಿದೆ. ಈ ಕುರಿತು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ತಜ್ಞರೊಂದಿಗೆ ಚರ್ಚೆ ನಡೆಸಿ ಒಟ್ಟಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ.
ಸಭೆಯಲ್ಲಿ ವಿವಿಧ ಕ್ಷೇತ್ರದ 60ಕ್ಕೂ ಅಧಿಕ ಮಂದಿ ಚಿಂತಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೆಕೊಂಡರು. ಪ್ರಮುಖವಾಗಿ ಸಿವಿಕ್ ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, ಸಿಟಿಜನ್ ಅಜೆಂಡಾ ಫಾರ್ ಬೆಂಗಳೂರಿನ ಸಂದೀಪ್ ಅನಿರುದ್ಧ, ಸಿಟಿಜನ್ ಫಾರ್ ಸಿಟಿಜನ್‌ನ ರಾಜಕುಮಾರ್ ದುಗರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.