ರಾಜ್ಯ ಬಿಜೆಪಿ ನಾಯಕರ ಬಣಜಗಳ : ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಣ ಪ್ರತಿಕ್ರಿಯೆ

KannadaprabhaNewsNetwork |  
Published : Nov 29, 2024, 01:31 AM ISTUpdated : Nov 29, 2024, 04:05 AM IST
Sadananda gowda

ಸಾರಾಂಶ

‘ರಾಜ್ಯ ನಾಯಕರು ಸರಿ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಈಗ ಬಿಜೆಪಿಯಲ್ಲಿದೆ. ತಕ್ಷಣ ವರಿಷ್ಠರು ಮಧ್ಯೆ ಪ್ರವೇಶಿಸಿ ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಏಟು ಬೀಳಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.  

ಬೆಂಗಳೂರು : ‘ರಾಜ್ಯ ನಾಯಕರು ಸರಿ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಈಗ ಬಿಜೆಪಿಯಲ್ಲಿದೆ. ತಕ್ಷಣ ವರಿಷ್ಠರು ಮಧ್ಯೆ ಪ್ರವೇಶಿಸಿ ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಏಟು ಬೀಳಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. 

ಎರಡೂ ಬಣಗಳು ಬೀದಿಗೆ ಹೋಗಿ ಕೈ ಕೈ ಮಿಲಾಯಿಸಿಕೊಳ್ಳುವ ಬದಲು ವಿಮಾನ ಹತ್ತಿ ದೆಹಲಿಗೆ ಹೋಗಿ ವರಿಷ್ಠರ ಬಳಿ ಮಾತನಾಡಲಿ ಎಂದೂ ತಾಕೀತು ಮಾಡಿದ್ದಾರೆ.ಎರೆಹುಳುಗಳು ನಾಗರಹಾವುಗಳಾಗಿ ಪರಿವರ್ತನೆಯಾದ ರೀತಿಯಲ್ಲಿ ಇವತ್ತು ಬಿಜೆಪಿಯಲ್ಲಿ ಹಲವು ನಾಯಕರು ತಮ್ಮ ಶಕ್ತಿ ಇಲ್ಲದಿದ್ದರೂ ಪಕ್ಷಕ್ಕೆ ಧಕ್ಕೆ ಬರುವಂಥ ವಿದ್ಯಮಾನಗಳನ್ನು ನಡೆಸುತ್ತಿರುವುದು ಸರಿಯಲ್ಲ ಎಂದೂ ಅವರು ವಕ್ಫ್ ವಿಚಾರವಾಗಿ ಪ್ರತ್ಯೇಕ ಪ್ರವಾಸ ಹಮ್ಮಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಸ್ತಿನ ಪ್ರಯೋಗ ಆಗಲೇಬೇಕು. ಅಂದರೆ ಮಾತ್ರ ಪರಿಸ್ಥಿತಿ ಸರಿಯಾಗಲಿದೆ. ಒಂದಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಉಳಿದವರು ಸರಿದಾರಿಗೆ ಬರಲಿದ್ದಾರೆ. ವರಿಷ್ಠರು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.ಹಿಂದೆ ಇಂಥ ಪರಿಸ್ಥಿತಿ ಉದ್ಭ‍ವಿಸಿದ ವೇಳೆ ನಮ್ಮ ಮಾತೃಸಂಸ್ಥೆಯಾದ ಸಂಘದ ನಾಯಕರು ಮಧ್ಯ ಪ್ರವೇಶ ಮಾಡಿ ಸರಿಪಡಿಸುತ್ತಿದ್ದರು. ಆದರೆ, ಇತ್ತೀಚಿಗೆ ಈ ಕೆಲಸ ಆಗುತ್ತಿಲ್ಲ. ಪಕ್ಷದ ವರಿಷ್ಠರು ಇದನ್ನು ಹತೋಟಿಗೆ ತರುವ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು.

ಆಗ ಹೀಗಾಗಿರಲಿಲ್ಲ: ನಾನು ಹಿಂದೆ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದಾಗ ಇದಕ್ಕಿಂತ ದೊಡ್ಡ ಬಣ ರಾಜಕೀಯವನ್ನು ಎದುರಿಸಿದ್ದೇನೆ. ಒಂದು ಯಡಿಯೂರಪ್ಪ ಬಣ. ಮತ್ತೊಂದು ಅನಂತಕುಮಾರ್ ಬಣ. ಆದರೆ, ಆ ಸಂದರ್ಭದಲ್ಲಿ ಯಾವುದೇ ಸವಾಲುಗಳು ಬಂದಾಗ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಈ ರೀತಿ ಬೀದಿಗೆ ಇಳಿಯುವ ಪರಿಸ್ಥಿತಿ ಬಂದಿರಲಿಲ್ಲ ಎಂದರು.

ಪಕ್ಷದ ಕಾರ್ಯಕ್ರಮಗಳಿಗೆ, ಕೆಲಸಗಳಿಗೆ ನಾವೆಲ್ಲ ಸಹಕಾರಿಯಾಗಿ ಕೆಲಸ ಮಾಡಬೇಕು. ಎರೆಹುಳು ಎರೆಹುಳುವಾಗಿ ಮಣ್ಣಿನ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕು. ನಾಗರಹಾವು ಆಗಬಾರದು. ಮಾಧ್ಯಮಗಳಲ್ಲೇ ದೊಡ್ಡವರಾಗಬೇಕು, ಮಾಧ್ಯಮಗಳಲ್ಲೇ ನಾಯಕರಾಗಬೇಕು ಎಂಬ ಧೋರಣೆ ಪಕ್ಷದಲ್ಲಿ ಹೆಚ್ಚುತ್ತಿದೆ. ದೊಡ್ಡ ಕೊಚ್ಚೆಯಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಇರುವಾಗ ನಾವು ನಮ್ಮೊಳಗೆ ಕಿತ್ತಾಟ ಮಾಡಿಕೊಂಡರೆ ಪಕ್ಷ ದಯನೀಯ ಸ್ಥಿತಿಗೆ ತಲುಪಲಿದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಗೌಡರು ಮಾರ್ಮಿಕವಾಗಿ ಹೇಳಿದರು.

ಜವಾಬ್ದಾರಿ ಇದ್ದವರೇ ಪಕ್ಷಕ್ಕೆ ಇರಿಸು ಮುರಿಸಾಗುವಂಥ ಬೆಳವಣಿಗೆಗೆ ಕಾರಣವಾಗುತ್ತಿರುವ ಈ ವೇಳೆ ವರಿಷ್ಠರು ಸಮ್ಮನೆ ಕುಳಿತುಕೊಳ್ಳಬಾರದು. ತಕ್ಷಣ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ