ಕರಗ ಉತ್ಸವಕ್ಕೆ ಬಿಬಿಎಂಪಿ ಹಣ ಬಿಡುಗಡೆ ಮಾಡಿಲ್ಲ: ಧರ್ಮರಾಯಸ್ವಾಮಿ ವ್ಯವಸ್ಥಾಪನಾ ಸಮಿತಿಯಿಂದ ಆರೋಪ

KannadaprabhaNewsNetwork |  
Published : Apr 13, 2025, 02:06 AM ISTUpdated : Apr 13, 2025, 04:12 AM IST
ಬಿಬಿಎಂಪಿ | Kannada Prabha

ಸಾರಾಂಶ

ವಿಶ್ವ ವಿಖ್ಯಾತ ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದರೆ, ಮತ್ತೊಂದು ಕಡೆ ಉತ್ಸವಕ್ಕೆ ಬಿಬಿಎಂಪಿಯಿಂದ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿತ್ತು.

 ಬೆಂಗಳೂರು :  ವಿಶ್ವ ವಿಖ್ಯಾತ ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದರೆ, ಮತ್ತೊಂದು ಕಡೆ ಉತ್ಸವಕ್ಕೆ ಬಿಬಿಎಂಪಿಯಿಂದ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿತ್ತು.

ಕರಗ ಉತ್ಸವ ಆರಂಭಗೊಂಡು 8 ದಿನ ಕಳೆದಿದ್ದು, ಈವರೆಗೆ ಬಿಬಿಎಂಪಿಯು ಮೀಸಲಿಟ್ಟ ₹1.50 ಕೋಟಿ ಮೊತ್ತದಲ್ಲಿ ಒಂದೇ ಒಂದು ರು. ಬಿಡುಗಡೆ ಮಾಡಿಲ್ಲ. ಸ್ವಂತ ಹಣ ವೆಚ್ಚ ಮಾಡಿ ಉತ್ಸವ ನಡೆಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ ಎಂದು ಕರಗದ ಪೂಜಾರಿ ಜ್ಞಾನೇಂದ್ರ, ಧರ್ಮರಾಯಸ್ವಾಮಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಧರ್ಮರಾಯಸ್ವಾಮಿ ದೇವಾಲಯವು ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅಪರ ಜಿಲ್ಲಾಧಿಕಾರಿಯ ಖಾತೆಗೆ ಮೊದಲ ಕಂತಿನಲ್ಲಿ ಬಿಬಿಎಂಪಿಯು ಈಗಾಗಲೇ ಬಿಡುಗಡೆ ಮಾಡಿದೆ. ಆ ಹಣವನ್ನು ಧರ್ಮರಾಯಸ್ವಾಮಿ ದೇವಸ್ಥಾನದ ಮುಜುರಾಯಿ ಇಲಾಖೆಯ ಕಾರ್ಯಾಕಾರಿ ಅಧಿಕಾರಿಗೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್‌ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಉತ್ಸವದ ಖರ್ಚು, ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್‌ ಸಲ್ಲಿಕೆ ಮಾಡಿದರೆ ಹಣ ಪಾವತಿಸಲಾಗುತ್ತದೆ. ಹಿಂದೆಯಿಂದಲೂ ಮುಂಗಡವಾಗಿ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಇಲ್ಲ. ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಹೂವು ಪೂರೈಕೆ ಸೇರಿದಂತೆ ಮೊದಲಾದ ವ್ಯವಸ್ಥೆ ಮಾಡುವ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕರಗಕ್ಕೆ ಕೆಟ್ಟ ಹೆಸರು ತರಲು ಯತ್ನ:

ಕೈಯಿಂದ ಖರ್ಚು ಮಾಡಿ ಅಲಂಕಾರ ಮಾಡುತ್ತಿದ್ದು, ₹20 ಲಕ್ಷ ವೆಚ್ಚ ಮಾಡಿದ್ದೇನೆ. ಬಿಬಿಎಂಪಿ ಕಚೇರಿ ಇರುವುದು ಕರಗ ಸಮಿತಿ ಜಾಗದಲ್ಲಿ. ಸೇವೆಯ ರೂಪದಲ್ಲಿ ಬಿಬಿಎಂಪಿ ಸೇವೆ ಮಾಡಿಕೊಂಡು ಬರುತ್ತಿದೆ. ನೇಮಿಸಿರುವ ಕಾರ್ಯಕಾರಿ ಅಧಿಕಾರಿ ತಪ್ಪಿಸಿಕೊಂಡು ತಿರುಗಿದ್ದಾರೆ. ಕಾಣದ ಕೈಗಳು ಕರಗಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಇದು ತುಂಬಾ ಬೇಸರವಾಗಿದೆ. ಜಿಲ್ಲಾಧಿಕಾರಿ ಈವರೆಗೆ ದೇವಸ್ಥಾನಕ್ಕೆ ಬಂದಿಲ್ಲ. ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಪಿತೂರಿಯಿಂದ ಹಣ ಬಿಡುಗಡೆ ಆಗಿಲ್ಲ:

ವಿಧಾನಪರಿಷತ್‌ನ ಮಾಜಿ ಸದಸ್ಯ ಪಿ.ಆರ್‌.ರಮೇಶ್‌ ಅವರ ಪಿತೂರಿಯಿಂದ ಹಣ ಬಿಡುಗಡೆ ಆಗಿಲ್ಲ. ಬಿಡುಗಡೆ ಆಗಿದೆ ಎಂದು ಹೇಳುವ ₹40 ಲಕ್ಷ ಯಾರ ಖಾತೆಗೆ ಹೋಗಿದೆ. ಒಂದು ರೂಪಾಯಿ ಕರಗಕ್ಕೆ ವೆಚ್ಚ ಮಾಡಿಲ್ಲ. ಈವರೆಗೆ ₹60 ಲಕ್ಷ ವೆಚ್ಚ ಮಾಡಿದ್ದೇವೆ. ಹಣ ನೀಡುವುದಕ್ಕೆ ಸಾಧ್ಯವಿಲ್ಲ ಎಂದರೆ ಹೇಳಿ. ನಾವೆ ಖರ್ಚು ಮಾಡಿಉತ್ಸವ ನಡೆಸುತ್ತೇವೆ ಎಂದು ಸರ್ಕಾರದ ವಿರುದ್ಧ ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುದಾನದಲ್ಲಿ ಯಾವುದೇ ಗೊಂದಲವಿಲ್ಲ: ಸಚಿವ

ಕರಗ ಉತ್ಸವಕ್ಕೆ ಹಣ ಬಿಡುಗಡೆಯಾಗಿಲ್ಲ ಎಂಬುದು ಸುಳ್ಳು. ಶುಕ್ರವಾರವೇ ಅಪರ ಜಿಲ್ಲಾಧಿಕಾರಿ ಖಾತೆಗೆ ಹಣ ಹೋಗಿದೆ, ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಕರಗ ಮುಕ್ತಾಯಗೊಳ್ಳುವವರಿಗೆ ಉತ್ಸವದ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಸಮಿತಿಯನ್ನು ಮುಂದುವರೆಸುವುದಕ್ಕೆ ಕೋರ್ಟ್‌ ಆದೇಶಿಸಿದೆ. ಆದರೆ, ಹಣಕಾಸಿನ ವಿಚಾರಗಳನ್ನು ನೋಡಿಕೊಳ್ಳುವುದಕ್ಕೆ ಕಾರ್ಯಾಕಾರಿ ಅಧಿಕಾರಿ ನೇಮಕಕ್ಕೆ ಕೋರ್ಟ್‌ ಆದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಅನುದಾನದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ಹಣ ಖರ್ಚು ಮಾಡಿದರೂ ಸಹ ಬಿಡುಗಡೆ ಮಾಡುತ್ತೇವೆ ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕರಗಕ್ಕೆ ಅಗತ್ಯ ಸಹಕಾರ

ಕರಗ ಉತ್ಸವಕ್ಕೆ ಸರ್ಕಾರದಿಂದ ಮತ್ತು ಬಿಬಿಎಂಪಿಯಿಂದ ಅಗತ್ಯ ಸಹಕಾರ ಮತ್ತು ಅನುದಾನ ನೀಡಲಾಗುತ್ತಿದೆ. ಉತ್ಸವ ಸಮಿತಿಯಲ್ಲಿ 2-3 ಭಾಗಗಳಾಗಿರಬೇಕು. ಎಲ್ಲರೂ ಒಟ್ಟಾಗಿ ಬಂದರೆ ಎಲ್ಲವೂ ಸರಿ ಹೋಗುತ್ತದೆ. ನಾವು ಅನುದಾನ ನೀಡದಿದ್ದರೆ ನಮಗೆ ಆಹ್ವಾನ ಯಾಕೆ ನೀಡಿದ್ದಾರೆ?

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ಹಣ ಬಿಡುಗಡೆ ಆಗಿದೆ: ರಮೇಶ್‌ವಿಧಾನಪರಿಷತ್‌ನ ಮಾಜಿ ಸದಸ್ಯ ಪಿ.ಆರ್‌.ರಮೇಶ್‌ ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಯಾವುದೇ ಅಧಿಕಾರ ಇಲ್ಲ. ಉತ್ಸವದ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಇರುವ ಸಮಿತಿ ಆಗಿದೆ. ಹಣ ಬಿಡುಗಡೆ ಆಗಿಲ್ಲ ಎಂಬುದು ಸರಿಯಲ್ಲ. ಕೋರ್ಟ್‌ ಆದೇಶದಂತೆ ಈಗಾಗಲೇ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿಗೆ ಹಣ ಬಿಡುಗಡೆ ಆಗಿದೆ. ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸತೀಶ್‌ಗೆ ಹಣ ಬಿಡುಗಡೆ ಆಗಿಲ್ಲ ಎಂದರೆ ಅದರ ಅರ್ಥವೇನು ಎಂದು ಪಶ್ನೆ ಮಾಡಿದ್ದಾರೆ.

PREV

Recommended Stories

ಪರಂ ನೇತೃತ್ವದಲ್ಲಿಂದು ದಲಿತರ ನಾಯಕರ ಸಭೆ
ಟ್ರಂಪ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ ಕೊಡಿ : ಶ್ವೇತ ಭವನ ಕಾರ್ಯದರ್ಶಿ