ಐದು ಇಲಾಖೆಗಳಲ್ಲಿ ಶೇ.40 ಕಮಿಷನ್‌ಗಿಂತ ಹೆಚ್ಚು ಭ್ರಷ್ಟಾಚಾರ ಆರೋಪ: ದಾಖಲೆಗಳಿಲ್ಲ - ತನಿಖೆಗೆ ಎಸ್‌ಐಟಿ

KannadaprabhaNewsNetwork |  
Published : Apr 12, 2025, 12:46 AM ISTUpdated : Apr 12, 2025, 04:30 AM IST
Vidhan soudha

ಸಾರಾಂಶ

  ಗುತ್ತಿಗೆದಾರರ ಸಂಘ, ಪೂರಕ ದಾಖಲೆ ನೀಡಲು ವಿಫಲವಾಗಿದೆ. ಹೀಗಾಗಿ ಶೇ.40ರಷ್ಟು ಕಮಿಷನ್‌ ಆರೋಪ ಖಚಿತ ಎಂಬ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟವಾಗಿದೆ ಎಂದು ನ್ಯಾ. ಎಚ್.ಎನ್‌.ನಾಗಮೋಹನ್‌ದಾಸ್ ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

  ಬೆಂಗಳೂರು : ಕಳೆದ ಸರ್ಕಾರದ ಅವಧಿಯಲ್ಲಿ ಪ್ರಮುಖ ಐದು ಇಲಾಖೆಗಳಲ್ಲಿ ಶೇ.40 ಕಮಿಷನ್‌ಗಿಂತ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘ, ಇದಕ್ಕೆ ಪೂರಕ ದಾಖಲೆ ನೀಡಲು ವಿಫಲವಾಗಿದೆ. ಹೀಗಾಗಿ ಶೇ.40ರಷ್ಟು ಕಮಿಷನ್‌ ಆರೋಪ ಖಚಿತ ಎಂಬ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟವಾಗಿದೆ ಎಂದು ನ್ಯಾ. ಎಚ್.ಎನ್‌.ನಾಗಮೋಹನ್‌ದಾಸ್ ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಇದೇ ವೇಳೆ ಗುತ್ತಿಗೆದಾರರ ಸಂಘ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಹೇಳಲಾಗದು. ಮೇಲ್ನೋಟಕ್ಕೆ ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಟೆಂಡರ್‌ ನಿಯಮದ ಉಲ್ಲಂಘನೆಗಳು ಕಂಡು ಬಂದಿವೆ. ಹೀಗಾಗಿ ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಗಮೋಹನ್‌ದಾಸ್‌ ವರದಿ ಆಧರಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ತೀರ್ಮಾನ ಮಾಡಲಾಗಿದೆ.

ಶೇ.40ಕ್ಕಿಂತಲೂ ಹೆಚ್ಚಿನ ಭ್ರಷ್ಟಾಚಾರ (ಕಮಿಷನ್‌) ನಡೆದಿರುವುದಾಗಿ ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್‌ ಮತ್ತು ನಿರ್ಮಿತಿ ಕೇಂದ್ರಗಳ ಕಾರ್ಯನಿರ್ವಹಣೆ, ಎಸ್‌.ಆರ್‌.ದರಗಳು, ಪಾರದರ್ಶಕ ಕಾಯ್ದೆ, ಪ್ಯಾಕೇಜ್‌ ಪದ್ಧತಿಯ ರದ್ದತಿ ಹಾಗೂ ಟೆಂಡರ್‌ನಲ್ಲಿ 40 ಪರ್ಸೆಂಟ್ ಕಮಿಷನ್‌ ದಂಧೆ ಬಗ್ಗೆ ತನಿಖೆ ನಡೆಸಲು ನಾಗಮೋಹನ್‌ ದಾಸ್‌ ನೇತೃತ್ವದ ತನಿಖಾ ಆಯೋಗ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆಯೋಗವು ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಿತ್ತು.

ಆಯೋಗದ ವರದಿಯಲ್ಲಿ, ಆಯೋಗವು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಪದಾಧಿಕಾರಿಗಳ ಜತೆ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಮೂರು ಬಾರಿ ಸಭೆ ನಡೆಸಿ ಚರ್ಚಿಸಿದೆ. ಸಚಿವರು ಕಾರ್ಯಾದೇಶದ ಮೊದಲು ಶೇ.5 ರಷ್ಟು ಕಮಿಷನ್‌, ಲೋಕಸಭೆ ಸದಸ್ಯರು, ಜನಪ್ರತಿನಿಧಿಗಳು ಶೇ.2 ರಷ್ಟು ಕಮಿಷನ್‌, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕಟ್ಟಡ ಕಾಮಗಾರಿಗೆ ಶೇ.5, ರಸ್ತೆ ಕಾಮಗಾರಿಗೆ ಶೇ.10 ರಷ್ಟು ಹಣ, ಕೆಆರ್‌ಐಡಿಎಲ್‌ ಹಾಗೂ ನಿರ್ಮಿತಿ ಕೇಂದ್ರದ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೇರವಾಗಿ ನೀಡಿ ಶೇ.10ರಷ್ಟು ಹಣ ಪಡೆಯುತ್ತಾರೆ. ಎಲ್‌ಒಸಿ ಹಿಂದುರುಗಿಸುವಾಗ ಶೇ.5 ರಿಂದ 6ರಷ್ಟು ಹಣ ಕೇಳುತ್ತಿದ್ದಾರೆ ಎಂದು ಮೊದಲು ಗುತ್ತಿಗೆದಾರರು ಆರೋಪಿಸಿದ್ದರು. ಆದರೆ ಇದಕ್ಕೆ ಪೂರಕ ದಾಖಲೆಗಳನ್ನು ನೀಡಲು ವಿಫಲವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಗುತ್ತಿಗೆದಾರರ ಸಂಘ 1593 ಪುಟಗಳ ದಾಖಲೆ ಸಲ್ಲಿಸಿದೆ. ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್‌ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ. ಅವಶ್ಯ ದಾಖಲೆ ಹಾಗೂ ಪುರಾವೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಅಲ್ಲದೆ ಗುತ್ತಿಗೆದಾರರು ನೀಡುವ ದೂರುಗಳು, ಹೇಳಿಕೆಗಳ ಗೌಪ್ಯತೆ ಕಾಪಾಡಲು ಮತ್ತು ಅವಶ್ಯಕತೆ ಇರುವವರಿಗೆ ಸೂಕ್ತ ರಕ್ಷಣೆ ಒದಗಿಸುವ ಭರವಸೆ ನೀಡಿದರೂ ಸೂಕ್ತ ದಾಖಲೆ ನೀಡಿಲ್ಲ. ಹೀಗಾಗಿ ಈ ಆರೋಪ ಖಚಿತ ಎಂಬ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

40 ಪರ್ಸೆಂಟ್ ಪೂರ್ಣ ಅಲ್ಲಗಳೆಯಲಾಗದು:

ಆಯೋಗವು ತನ್ನ ಶಿಫಾರಸಿನಲ್ಲಿ ಶೇ.40ರಷ್ಟು ಕಮಿಷನ್‌ ಆರೋಪ ಸಾಬೀತುಪಡಿಸಲು ಗುತ್ತಿಗೆದಾರರ ಸಂಘ ವಿಫಲ ಆಗಿದೆ. ಇದಕ್ಕೆ ಬಲಿಪಶುಗಳಾಗುತ್ತೇವೆ ಎಂಬ ಭಯ ಹಾಗೂ ಆತಂಕ ಕಾರಣವಾಗಿರಬಹುದು. ಸಾರ್ವಜನಿಕ ದೂರುಗಳ ತನಿಖೆ ನಡೆಸಿದಾಗ ಟೆಂಡರ್‌ ಪ್ರಕ್ರಿಯೆಯ ಪೂರ್ವದಲ್ಲಿ ಮತ್ತು ನಂತರದ ಪ್ರಕ್ರಿಯೆಯಲ್ಲಿ ಕಂಡು ಬಂದ ವಿಳಂಬ, ಕಾನೂನು ಉಲ್ಲಂಘನೆ, ಸ್ವಜನ ಪಕ್ಷಪಾತ ಇತ್ಯಾದಿಗಳು ಮೇಲ್ನೋಟಕ್ಕೆ ಭ್ರಷ್ಟಾಚಾರ ಕಾಣುತ್ತದೆ. ಹೀಗಾಗಿ ಶೇ.40 ರಷ್ಟು ಕಮಿಷನ್‌ ಆರೋಪದಲ್ಲಿ ಸ್ವಲ್ಪ ಮಟ್ಟಿಗೆ ಸತ್ಯ ಇರುವುದನ್ನು ಅಲ್ಲಗೆಳೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಒಟ್ಟು 3 ಲಕ್ಷ ಕಾಮಗಾರಿಗಳಲ್ಲಿ 1724 ಕಾಮಗಾರಿಗಳ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಶೇ.8 ರಷ್ಟು ಕಾಮಗಾರಿಗಳಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯದೆ ನಿರ್ವಹಿಸುವುದು ಕಂಡು ಬರುತ್ತದೆ. ಶೇ.14 ರಷ್ಟು ಟೆಂಡರ್‌ ಪ್ರಕ್ರಿಯೆ ಸಮರ್ಪಕವಾಗಿ ಪಾಲಿಸಿಲ್ಲ.

ಶೇ.10 ರಷ್ಟು ಕಾಮಗಾರಿಗಳನ್ನು ಗುಣಮಟ್ಟವನ್ನು ಕಾಯ್ದುಕೊಳ್ಳದೆ ನಿರ್ವಹಿಸಲಾಗಿದೆ. ಶೇ.13ರಷ್ಟು ಕಾಮಗಾರಿಗಳ ಬಿಲ್ಲುಗಳಲ್ಲಿ ಶಾಸನಬದ್ಧ ಕಟಾವಣೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಶೇ.17ರಷ್ಟು ಕಾಮಗಾರಿಗಳಲ್ಲಿ ಭದ್ರತಾ ಠೇವಣಿಯನ್ನು ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡಿಲ್ಲದಿರುವುದು ಕಂಡು ಬರುತ್ತದೆ.

ಶೇ.23ರಷ್ಟು ಕಾಮಗಾರಿಗಳ ಬಿಲ್ಲುಗಳ ಪಾವತಿಯಲ್ಲಿ ಸೀನಿಯಾರಿಟಿ ಪಾಲಿಸದೆ ಇರುವುದು ಮತ್ತು ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿಯಲ್ಲಿ ಪಾವತಿ ಮಾಡಿಲ್ಲದಿರುವುದು ಕಂಡು ಬರುತ್ತಿದೆ. ಮನರೇಗಾ ಕಾಮಗಾರಿಗಳಲ್ಲಿ ಶೇ.12-14 ರಷ್ಟು ಕಾಮಗಾರಿಗಳನ್ನು ಕ್ರಿಯಾ ಯೋಜನೆ, ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಅನುಮೋದನೆ ಪಡೆಯದೆ ನಿರ್ವಹಿಸಿರುವುದು ಕಂಡು ಬರುತ್ತದೆ.

ಗಂಭೀರ ನ್ಯೂನತೆಗಳಿಗೆ ಕಾರಣವಾದ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆದು ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಉಳಿದ ಅಧಿಕಾರಿಗಳನ್ನೂ ವಿವರಣೆ ಪಡೆದು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!