ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಲಹೆ

ಸಾರಾಂಶ

ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತಿದೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಯಾರಾದರೂ ಲಂಚ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

  ಬೆಂಗಳೂರು :  ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತಿದೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಯಾರಾದರೂ ಲಂಚ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗುತ್ತಿಗೆ ಬಿಲ್‌ ಪಾವತಿಗೆ ಕಮಿಷನ್‌ ಬೇಡಿಕೆ ಹಾಗೂ ವಿಶೇಷ ಎನ್‌ಓಸಿ ಮೂಲಕ ಬಲಾಢ್ಯರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

‘ಇದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತಿದೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ಎಲ್ಲಾ ಇಲಾಖೆಗಳ ಬಗ್ಗೆಯೂ ದೂರು ನೀಡಿರಬಹುದು. ಅದೇ ರೀತಿ ನನ್ನ ಇಲಾಖೆಯ ಬಗ್ಗೆಯೂ ಪ್ರಸ್ತಾಪ ಮಾಡಿರಬಹುದು. ಮೊದಲು ಅವರು ದೂರು ನೀಡಲಿ’ ಎಂದು ಹೇಳಿದರು.

ಎಲ್ಲಾ ಗುತ್ತಿಗೆದಾರರ ಬಿಲ್‌ ಪಾವತಿ ಆಗುವುದಿಲ್ಲ. ಆದ್ಯತೆ ಮೇರೆಗೆ ಹಣ ಬಿಡುಗಡೆ ಆಗುತ್ತಿರುತ್ತದೆ. ನಮಗೆ ಬಿಲ್ ನೀಡಿ ಎಂದು ಕೇಳುತ್ತಾರೆ. ನಾವು ಶೇ. 10-20 ರಷ್ಟು ಬಿಲ್ ಬಿಡುಗಡೆ ಮಾಡಿರುತ್ತೇವೆ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ ಅವರು ಲೋಕಾಯುಕ್ಕೆ ಹೋಗಲಿ ಎಂದಷ್ಟೇ ಹೇಳಿದರು.

ರಾಯರೆಡ್ಡಿಗೆ ಕರೆದು ಮಾತನಾಡುವೆ:

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ ಎಂಬ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಆ ರೀತಿ ಹೇಳಿಲ್ಲ ಎಂದು ಮರು ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಅವರನ್ನು ಕರೆದು ಮಾತನಾಡುತ್ತೇನೆ. ಅವರ ಬಳಿ ಚರ್ಚೆ ನಡೆಸುತ್ತೇನೆ’ ಎಂದು ಹೇಳಿದರು.

Share this article