‘ಗಾಂಧಿ ಭಾರತ’ ಸಮಾವೇಶಕ್ಕೆ ಬೆಳಗಾವಿ ಸಜ್ಜು ರಾಹುಲ್‌, ಪ್ರಿಯಾಂಕಾ ಸೇರಿ ಗಣ್ಯರು ಭಾಗಿ

Published : Jan 20, 2025, 07:46 AM IST
DK Shivakumar Siddaramaiah

ಸಾರಾಂಶ

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ 2024ರ ಡಿಸೆಂಬರ್ 27ರಂದು ಮುಂದೂಡಲಾಗಿದ್ದ ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಕಾರ್ಯಕ್ರಮವು ಜ.21ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ.

ಬೆಳಗಾವಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ 2024ರ ಡಿಸೆಂಬರ್ 27ರಂದು ಮುಂದೂಡಲಾಗಿದ್ದ ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಕಾರ್ಯಕ್ರಮವು ಜ.21ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ.

ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜಿವಾಲಾ ಅವರು ಮುಖ್ಯ ವೇದಿಕೆಯನ್ನು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.

ನಗರ ಕಾಂಗ್ರೆಸ್‌ಮಯ:

ಸಮಾವೇಶದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇಡೀ ಬೆಳಗಾವಿ ನಗರ ಕಾಂಗ್ರೆಸ್‌ಮಯವಾಗಿದೆ. ನಗರದ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ, ಗಾಂಧಿ ನಗರ, ರಾಮದೇವ ವೃತ್ತ ಸೇರಿದಂತೆ ಸಮಾವೇಶಕ್ಕೆ ಬರುವ ನಗರದ ಪ್ರಮುಖ ಮಾರ್ಗಗಳಲ್ಲಿ ಕಾಂಗ್ರೆಸ್‌ ಬಾವುಟಗಳು, ಫ್ಲೆಕ್ಸ್‌, ಕಾಂಗ್ರೆಸ್‌ ಮುಖಂಡರನ್ನು ಸ್ವಾಗತಿಸುವ ಕಟೌಟ್‌ಗಳು ರಾರಾಜಿಸುತ್ತಿವೆ. ನಗರ ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಸಮಾವೇಶಕ್ಕೆ ಅಂದಾಜು 3-5 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಭದ್ರತೆಗಾಗಿ ಅಂದಾಜು 5-6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗಾವಿ ನಗರಕ್ಕೆ ನಾಲ್ಕು ದಿಕ್ಕಿನಿಂದಲೂ ಬರುವವರಿಗಾಗಿ ನಗರದ ಹೊರಗಡೆಯೇ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಘಟಾನುಘಟಿ ‘ಕೈ’ ನಾಯಕರು ಬೆಳಗಾವಿಗೆ:

ಜ.21ರ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸಚಿವರು, ಕಾಂಗ್ರೆಸ್‌ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಸಂಸದರು, ಎಐಸಿಸಿ ಪದಾಧಿಕಾರಿಗಳು ಸೇರಿದಂತೆ ಸುಮಾರು 2,000 ರಿಂದ 2,500 ಜನನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಗಾಂಧೀ ಪ್ರತಿಮೆ ಅನಾವರಣ:

ಅಂದು ಬೆಳಗ್ಗೆ 10ಕ್ಕೆ ಸುವರ್ಣಸೌಧದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧೀಜಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಸುವರ್ಣ ಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಭೋಜನಕೂಟ ನಡೆಯಲಿದೆ. ಬಳಿಕ, ಮಧ್ಯಾಹ್ನ 1ಕ್ಕೆ ಸಿಪಿಇಡಿ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಮಾರಂಭ ನಡೆಯಲಿದೆ.

ಮುಂದೂಡಿದ್ದ ಕಾರ್ಯಕ್ರಮ:

ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು 2024ರ ಡಿಸೆಂಬರ್‌ 26, 27ರಂದು ಆಯೋಜಿಸಲಾಗಿತ್ತು. ಡಿ.26ರಂದು ಬೆಳಗಾವಿಯ ವೀರಸೌಧದಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಸಹ ಯಶಸ್ವಿಯಾಗಿ ಜರುಗಿತು. ಆದರೆ, ಅದೇ ದಿನ ರಾತ್ರಿ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಮರುದಿನ, ಡಿ.27ರಂದು ಕಾಂಗ್ರೆಸ್‌ ಜನಸಮಾವೇಶ ಹೆಸರಿನಲ್ಲಿ ನಡೆಯಬೇಕಿದ್ದ ‘ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶವನ್ನು ರದ್ದುಗೊಳಿಸಲಾಗಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ