ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ನಾನು ಮನವಿ ಮಾಡಿದ್ದೇನೆ, ರಾಜೀನಾಮೆ ನೀಡಿಲ್ಲ ಎಂದು ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರು : ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ನಾನು ಮನವಿ ಮಾಡಿದ್ದೇನೆ, ರಾಜೀನಾಮೆ ನೀಡಿಲ್ಲ ಎಂದು ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.
ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಸುನೀಲ್ ಕುಮಾರ್ ಅವರು ಕಳೆದ ಬೆಳಗಾವಿ ಅಧಿವೇಶನದ ವೇಳೆಯೇ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೂರ್ಣಾವಧಿ ನೀಡಬೇಕಾಗುತ್ತದೆ. ನನಗೆ ವೈಯಕ್ತಿಕ ಕಾರಣಕ್ಕಾಗಿ ಪೂರ್ಣಾವಧಿ ನೀಡಲು ಆಗುತ್ತಿಲ್ಲ. ಹೀಗಾಗಿ ನನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದೇನೆ. ನಾನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಂದರ್ಭಿಕವಾಗಿ ಪಕ್ಷದ ಯಾವುದೇ ಜವಾಬ್ದಾರಿ ನೀಡಿದರೂ ನಾನು ನಿರ್ವಹಿಸುತ್ತೇನೆ. ಪಕ್ಷದ ಯಾವುದೇ ಸಂಘಟನೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುನೀಲ್‌ಕುಮಾರ್, ನಾನು ಯಾವ ಬಣಕ್ಕೂ ಸೇರಿದವನಲ್ಲ. ನಾನು ಪಕ್ಷದ ಮನುಷ್ಯ ಎಂದು ಸ್ಪಷ್ಟಪಡಿಸಿದರು.