ಸ್ವಾಧೀನ ಪತ್ರ ಸಿಕ್ಕರೂ ಫಲಾನುಭವಿಗಳಿಗಿಲ್ಲ ಗೃಹ ಪ್ರವೇಶ ಭಾಗ್ಯ!

KannadaprabhaNewsNetwork |  
Published : May 18, 2025, 01:05 AM ISTUpdated : May 18, 2025, 04:23 AM IST
ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಆರ್‌ಜಿಎಸ್‌ಸಿಎಲ್ ಕಚೇರಿಗೆ ಆಗಮಿಸಿದ್ದ ಫಲಾನುಭವಿಗಳು. | Kannada Prabha

ಸಾರಾಂಶ

  ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದ್ದರ ಪರಿಣಾಮ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯ ನೂರಾರು ಫಲಾನುಭವಿಗಳು ನೀರು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕವಿಲ್ಲದ ಫ್ಲ್ಯಾಟ್‌ಗಳನ್ನು ಪ್ರವೇಶಿಸಲಾಗದೆ ಪರದಾಡುವಂತಾಗಿದೆ.

 ಬೆಂಗಳೂರು :  ಬೆಂಗಳೂರು ನಗರ ಜಿಲ್ಲಾಡಳಿತವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗವನ್ನು ಕಂದಾಯ ಇಲಾಖೆಯ ಜಮೀನು ಎಂದು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದ್ದರ ಪರಿಣಾಮ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯ ನೂರಾರು ಫಲಾನುಭವಿಗಳು ನೀರು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕವಿಲ್ಲದ ಫ್ಲ್ಯಾಟ್‌ಗಳನ್ನು ಪ್ರವೇಶಿಸಲಾಗದೆ ಪರದಾಡುವಂತಾಗಿದೆ.

ಬೆಂಗಳೂರು ಪೂರ್ವ ತಾಲೂಕಿನ ಕೆ.ನಾರಾಯಣಪುರದಲ್ಲಿ ಮುಖ್ಯಮಂತ್ರಿಯವರ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಅಪಾರ್ಟ್‌ಮೆಂಟ್ ನಿರ್ಮಿಸಲು ಜಿಲ್ಲಾಡಳಿತವು ಕೆಲವು ವರ್ಷಗಳ ಹಿಂದೆ ಆರ್‌ಜಿಎಚ್‌ಸಿಎಲ್‌ಗೆ 1 ಎಕರೆ 21 ಗುಂಟೆ ಜಮೀನು ಹಸ್ತಾಂತರಿಸಿತ್ತು.

ಆ ಜಾಗದಲ್ಲಿ ಆರ್‌ಜಿಎಚ್‌ಸಿಎಲ್‌ 160 ಫ್ಲ್ಯಾಟ್‌ಗಳಿರುವ 9 ಮಹಡಿಯ 160 ಎರಡು ಬಿಎಚ್‌ಕೆ ಅಪಾರ್ಟ್‌ಮೆಂಟ್ ನಿರ್ಮಿಸಿದೆ. ನಂತರ ಮೂಲಸೌಕರ್ಯ ಒದಗಿಸಲು ಬಿಬಿಎಂಪಿಗೆ ಕೇಳಿದಾಗ, ಅದು ಬಿಡಿಎ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಶ್ಚರ್ಯಗೊಂಡ ಅಧಿಕಾರಿಗಳು ಈ ಕುರಿತು ಪರಿಶೀಲಿಸಿದಾಗ ಅದು ಬಿಡಿಎ ಜಾಗ ಎಂದು ಗೊತ್ತಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಾಗ, ಬಿಡಿಎಗೆ ಪರ್ಯಾಯ ಜಮೀನು ಒದಗಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

‘ಜಿಲ್ಲಾಡಳಿತ ಒದಗಿಸುತ್ತಿರುವ ಪರ್ಯಾಯ ಜಾಗದ ಕುರಿತು ಬಿಡಿಎನವರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಜಮೀನು ವಿಚಾರವಾಗಿ ಅಪಾರ್ಟ್‌ಮೆಂಟ್‌ಗೆ ಅಗತ್ಯ ಮೂಲಸೌಕರ್ಯ ಒದಗಿಸಲು ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲೇ ಸಮಸ್ಯೆ ಪರಿಹಾರಿಸಿ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ಬರೆಯಯಲಾಗಿದೆ ಎಂದು ಆರ್‌ಜಿಎಚ್‌ಸಿಎಲ್‌ನ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ ತಿಳಿಸಿದರು.

460 ಫ್ಲ್ಯಾಟ್‌ಗಳಿಗೆ ನೀರಿಲ್ಲ!

ಇನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡ ನಾಗಮಂಗಲದಲ್ಲಿ 460 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ಅಲ್ಲಿಯು ನೀರು ಮತ್ತು ವಿದ್ಯುತ್ ಸಮಸ್ಯೆಯಿದೆ.

‘ಬ್ಯಾಂಕ್ ಸಾಲ ಪಡೆದು ದೊಡ್ಡ ನಾಗಮಂಗಲದಲ್ಲಿ ಫ್ಲ್ಯಾಟ್ ಖರೀದಿಸಿದ್ದೇನೆ. ಎರಡೂವರೆ ತಿಂಗಳಿಂದ ಇಎಂಐ ಆರಂಭವಾಗಿದೆ. ಆದರೆ, ನೀರಿಲ್ಲದೆ ಫ್ಲ್ಯಾಟ್‌ಗೆ ಹೋಗಲಾಗುತ್ತಿಲ್ಲ. ಅಲ್ಲಿ ಹಾಕಿರುವ ಬೋರ್‌ವೆಲ್‌ಗಳಲ್ಲಿ ನೀರು ಬಂದಿಲ್ಲ. ಈಗಾಗಲೇ ನೂರಾರು ಜನರಿಗೆ ಸ್ವಾಧೀನ ಪತ್ರ ವಿತರಿಸಲಾಗಿದೆ. ಅದರಲ್ಲಿ 10 ಜನ ಮಾತ್ರ ವಾಸವಿದ್ದು, ಅವರು ಟ್ಯಾಂಕರ್ ನೀರು ಹೊಡೆಸುತ್ತಿದ್ದಾರೆ’ ಎಂದು ಫ್ಲ್ಯಾಟ್ ಮಾಲೀಕ ಮೂರ್ತಿ ಅಳಲು ತೋಡಿಕೊಂಡರು.

‘ಸ್ವಾಧೀನ ಪತ್ರ ನೀಡಿರುವ ಫ್ಲ್ಯಾಟ್‌ಗಳಲ್ಲಿ ನೀರು, ಒಳಚರಂಡಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕವಿಲ್ಲ. ಕೆಲವು ಮನೆಗಳಿಗೆ ಮೀಟರ್ ಕೂಡ ಅಳವಡಿಸಿಲ್ಲ. ಮುಂದಿನ ತಿಂಗಳಿಂದ ಶಾಲೆ ಆರಂಭವಾಗುತ್ತವೆ. ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ. ಈಗ ವಾಸವಿರುವ ಬಾಡಿಗೆ ಮನೆಯ ಬಾಡಿಗೆ ಕಟ್ಟುವ ಜೊತೆಗೆ ಇಎಂಐ ಕಟ್ಟುತ್ತಿದ್ದೇವೆ. ಜೀವನ ದುಸ್ತರವಾಗಿದೆ’ ಎಂದು ಫ್ಲ್ಯಾಟ್ ಮಾಲೀಕರಾದ ಸರಸ್ವತಿ ಹೇಳಿದರು.

ಮನವಿ ಪತ್ರ ಸಲ್ಲಿಕೆ

ಶನಿವಾರ ಕೆಎಚ್‌ಬಿ ಕಚೇರಿಗೆ ಭೇಟಿ ನೀಡಿದ ಅನೇಕ ಫಲಾನುಭವಿಗಳು, ಆರ್‌ಜಿಎಚ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳ್ಕರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಆದಷ್ಟು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

PREV
Read more Articles on

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ