ಕೊತ್ತನೂರಿಗೆ ಈ ದೇಶದ ಬಗ್ಗೆ ಏನ್ ಗೊತ್ತಿದೆ, ರಿಯಲ್ ಎಸ್ಟೇಟ್ ಬಗ್ಗೆ ಬೇಕಾದರೇ ಹೇಳ್ತಾರೆ: ಪ್ರತಾಪ್ ಸಿಂಹ

KannadaprabhaNewsNetwork | Updated : May 17 2025, 04:54 AM IST
Follow Us

ಸಾರಾಂಶ

ಒಂದು ಚದರಡಿಗೆ ಎಷ್ಟು ಅಂಥ ಶಾಸಕ ಕೊತ್ತನೂರು ಮುಂಜುನಾಥ್‌ಗೆ ಗೊತ್ತಿದೆ. ಅವರಿಗೆ ಈ ದೇಶ, ಯುದ್ಧ ಅಂದರೇನು ಗೊತ್ತಾಗುತ್ತೆ. ಕೊತ್ತನೂರು ಮಂಜುನಾಥ್ ಹೋಗಿ ಅವರ ನಾಯಕ ಶಶಿ ತರೂರು ಅವರನ್ನು ಕೇಳಲಿ, ಶಶಿ ತರೂರೇ ಸರಿಯಾಗಿ ಉತ್ತರ ಕೊಡುತ್ತಾರೆ.

ಮೈಸೂರು : ಶಾಸಕ ಕೊತ್ತನೂರು ಮಂಜುನಾಥ್‌ಗೆ ಈ ದೇಶದ ಬಗ್ಗೆ ಏನ್ ಗೊತ್ತಿದೆ. ರಿಯಲ್ ಎಸ್ಟೇಟ್ ಬಗ್ಗೆ ಬೇಕಾದರೇ ಮಂಜುನಾಥ್ ಹೇಳ್ತಾರೆ‌ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಚದರಡಿಗೆ ಎಷ್ಟು ಅಂಥ ಮುಂಜುನಾಥ್‌ಗೆ ಗೊತ್ತಿದೆ. ಅವರಿಗೆ ಈ ದೇಶ, ಯುದ್ಧ ಅಂದರೇನು ಗೊತ್ತಾಗುತ್ತೆ. ಕೊತ್ತನೂರು ಮಂಜುನಾಥ್ ಹೋಗಿ ಅವರ ನಾಯಕ ಶಶಿ ತರೂರು ಅವರನ್ನು ಕೇಳಲಿ, ಶಶಿ ತರೂರೇ ಸರಿಯಾಗಿ ಉತ್ತರ ಕೊಡುತ್ತಾರೆ ಎಂದರು.

ಈ ರೀತಿ ಮಾತನಾಡುವುದು ಕಾಂಗ್ರೆಸ್ ಮನಃಸ್ಥಿತಿ. ಪ್ರತಿ ಬಾರಿಯೂ ಯುದ್ಧ ನಡೆದ ಸಂದರ್ಭದಲ್ಲಿ ಪಾಕಿಸ್ತಾನಕ್ಕಿಂತಲೂ ಮೊದಲು ಸಾಕ್ಷಿ ಕೇಳುವುದು ಕಾಂಗ್ರೆಸ್‌ನವರು. ಹಿಂದನ ಸಂದರ್ಭದಲ್ಲೂ ಅವರು ಅದೇ ಕೆಲಸ ಮಾಡಿದರು. ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್ ಅಲ್ವಾ. ಹೀಗಾಗಿ, ಅವರಿಗೆ ಎಲ್ಲದಕ್ಕೂ ಸಾಕ್ಷಿ ಬೇಕು ಎಂದು ಕಿಡಿಕಾರಿದರು.

ಬ್ರಹ್ಮೋಸ್ ಸಿದ್ಧವಾಗಿದ್ದು ಮನ್ಮೋಹನ ಸಿಂಗ್ ಕಾಲದಲ್ಲಿ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅನ್ಪಡ್‌ಗಳೆಲ್ಲಾ ರಾಜಕಾರಣಕ್ಕೆ ಬಂದ್ರೆ ಸಚಿವರಾದ್ರೆ ಇದೇ ಆಗೋದು. ಶಿಕ್ಷಣ ಸಚಿವರು ಯಾವ ಕಾಲೇಜಿನಲ್ಲಿ ಓದಿದ್ರು, ಅವರ ಶಿಕ್ಷಣ ಕಥೆ ಏನು ಅಂಥ ಎಲ್ಲರಿಗೂ ಗೊತ್ತಿದೆ ಬಿಡಿ. ಅದಕ್ಕೆನೇ ಹೇಳೊದು ಅಕ್ಷರಸ್ಥರು ರಾಜಕಾರಣಕ್ಕೆ ಬರಬೇಕು ಅಂಥ. ಅನಕ್ಷರಸ್ಥರು ಸಚಿವರಾದ್ರೆ ಇಂತಹ ಹೇಳಿಕೆಗಳು ಬರುತ್ತವೆ ಎಂದು ಕುಟುಕಿದರು.

ಸಿಎಂ ಹೇಳಿಕೆಗೆ ತಿರುಗೇಟು:

ಯುದ್ಧದ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಜನರ ತೆರಿಗೆ ದುಡ್ಡಲ್ಲಿ 2 ಸಾವಿರ ಕೊಟ್ಟು ನಾನೇ ಕೊಟ್ಟೆ, ನಾನೇ ಕೊಟ್ಟೆ ಅಂಥ ಯಾಕೆ ಹೇಳ್ತೀರಾ. ಅದರ ಕ್ರೆಡಿಟ್ ಅನ್ನ ತೆರಿಗೆದಾರರಿಗೆ ಯಾಕೆ ಕೊಡಲ್ಲ. ಸಿದ್ದರಾಮಯ್ಯನಹುಂಡಿಯಲ್ಲಿ ಚಿನ್ನದ ಅಲೂಗೆಡ್ಡೆ, ಚಿನ್ನದ ಕಬ್ಬು ಬೆಳೆದು ಅದರಲ್ಲಿ ಬಂದ ದುಡ್ಡನ್ನ ಜನಕ್ಕೆ ಕೊಡುತ್ತೀದ್ದೀರಾ. ನನ್ನ ಹೆಂಡ್ತಿಗೂ, ಮಹಾದೇವಪ್ಪ ಹೆಂಡ್ತಿಗೂ ಫ್ರೀ ಅಂತಿರಲ್ಲ. ಆ ಫ್ರೀಗೆ ದುಡ್ಡು ಕೊಟ್ಟಿದ್ದು ಯಾರು ಎಲ್ಲದಕ್ಕೂ ನಾನೇ ನಾನೇ ಕೊಟ್ಟಿದ್ದು ಅಂಥ ಯಾಕೆ ಕೊಚ್ಚಿಕೊಳ್ತೀರಾ ಎಂದು ತಿರುಗೇಟು ನೀಡಿದರು.

ಯುದ್ಧ ಕ್ರೆಡಿಟ್ ಸೈನಿಕರಿಗೆ ಸಿಗಬೇಕು. ಆದರೆ, ಜನ ಮೋದಿ ಅಂಥ ಗಟ್ಟಿ ನಾಯಕತ್ವಕ್ಕೆ ಅದರ ಕ್ರೆಡಿಟ್ ಕೊಡ್ತಾದ್ದಾರೆ ಅಷ್ಟೇ. ಹಿಂದೆ ಇಂದಿರಾ ಗಾಂಧಿಗೂ ಕ್ರೆಡಿಟ್ ಕೊಡಲಿಲ್ವಾ. ಇಂದಿರಾ ಗಾಂಧಿ ಸಮಯದಲ್ಲಿ ಯುದ್ಧ ಸೋತಾಗ ಇಂದಿರಾ ಗಾಂಧಿನ ಬೈಯಲಿಲ್ವಾ. ಇದೆಲ್ಲಾ ಜನ ಕೊಡುವ ಕ್ರೆಡಿಟ್‌ಗಳು. ಜನ ಮೋದಿಗೆ ಕ್ರೆಡಿಟ್ ಕೊಟ್ರೆ ನಿಮಗೆ ಯಾಕೆ ಹೊಟ್ಟೆ ಹುರಿ ಎಂದು ಪ್ರಶ್ನಿಸಿದರು.

ಮುಂಬೈ ದಾಳಿಯಾದಗ ಅವತ್ತಿನ ಯುಪಿ ಸರ್ಕಾರ ಯಾಕೆ ದಾಳಿ ಮಾಡಲಿಲ್ಲ. ಇವತ್ತು ಸೈನಿಕರಿಗೆ ಸ್ವಾತಂತ್ರ್ಯ ಆ ಶಕ್ತಿಯನ್ನ ಮೋದಿ ಕೊಟ್ಟಿದ್ದಾರೆ. ಅದೇ ನಿಜವಾದ ನಾಯಕತ್ವ. ನೀವು ಮಾಡಲು ಆಗದನ್ನ ಮೋದಿ ಮಾಡಿದ್ದಾರೆ ಅಷ್ಟೇ ಎಂದರು.

ಬಲುಚಿಸ್ತಾನ ಸ್ವಾತಂತ್ರ್ಯ ಸಂದರ್ಭದಲ್ಲಿ ಭಾರತಕ್ಕೆ ಸೇರಿ ಬಿಡುತ್ತಿತ್ತು. ನೆಹರುನಂತ ಮೂರ್ಖ ನಾಯಕನಿಂದ ಆವತ್ತು ಅವರು ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಹೋದರು. ಈಗ ಮೋದಿ ನಾಯಕತ್ವ ಇದೆ. ಈಗಲಾದರೂ ಅವರು ನಮ್ಮ ಜೊತೆ ಸೇರಲಿ ಎಂದು ಆಶಿಸುತ್ತೇವೆ. ಬಲುಚಿಸ್ತಾನಕ್ಕೆ ಮೊದಲಿನಿಂದಲೂ ನಮ್ಮ ಜೊತೆ ಇರಬೇಕೆಂಬ ಆಸೆ ಇದೆ. ಅದು ಈಗಲಾದರೂ ಕೈಗೂಡಲಿ ಎಂದರು.

Read more Articles on