ತುಂಗಾಭದ್ರಾ ಜಲಾಶಯದ ವ್ಯಾಪ್ತಿಯ ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯ 33 ಗೇಟ್‌ಗಳನ್ನು ಬದಲಾವಣೆ ಮಾಡಬೇಕೆಂಬ ತಜ್ಞರ ಸಲಹೆ ಪಾಲಿಸಿ ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ವಿಧಾನಸಭೆ : ತುಂಗಾಭದ್ರಾ ಜಲಾಶಯದ ವ್ಯಾಪ್ತಿಯ ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯ 33 ಗೇಟ್‌ಗಳನ್ನು ಬದಲಾವಣೆ ಮಾಡಬೇಕೆಂಬ ತಜ್ಞರ ಸಲಹೆ ಪಾಲಿಸಿ ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಶುಕ್ರವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರದ ಅಧೀನದ ತುಂಗಾಭದ್ರಾ ಮಂಡಳಿಯು ತುಂಗಾಭದ್ರಾ ಜಲಾಶಯದ ರೈತರ ಹಿತದೃಷ್ಟಿಯಿಂದ ಮೇ- 2026ರ ಒಳಗೆ ಹೊಸ ಎಲ್ಲಾ ಗೇಟ್ ಗಳನ್ನು ಅಳವಡಿಕೆಗೆ ಕ್ರಮ ಕೈಗೊಂಡಿದ್ದರೂ ಕರ್ನಾಟಕ ಸರ್ಕಾರವು ತಮ್ಮ ಪಾಲಿನ ಹಣ ಹಿಂಪಡೆದಿರುವುದು ಆಘಾತಕಾರಿ ಸಂಗತಿ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರ ಹಿತ ಕಾಪಾಡಬೇಕಾದರೆ ಕರ್ನಾಟಕ ಪಾಲಿನ ತಡೆಹಿಡಿದಿರುವ ಮೊತ್ತವನ್ನು ಬಿಡುಗಡೆ ಮಾಡಿ ಮಾನ ಮರ್ಯಾದೆ ಉಳಿಸಿಕೊಳ್ಳಲಿ ಎಂದು ತೀಕ್ಷ್ಣವಾಗಿ ಹೇಳಿದರು.
ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದುಬಿದ್ದ ಪ್ರಕರಣ ತಮಗೆಲ್ಲಾ ಗೊತ್ತಿದೆ. ಆ ಸಮಯದಲ್ಲಿ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಗೇಟ್ ಅಳವಡಿಸಿತ್ತು. ಆ ಮುರಿದು ಬಿದ್ದ ಗೇಟ್ ಒಳಗೊಂಡಂತೆ ಉಳಿದ 32 ಗೇಟ್ ಗಳನ್ನು ಒಳಗೊಂಡಂತೆ ಒಟ್ಟಾರೆ 33 ಗೇಟ್ ಗಳನ್ನು ಬದಲಾವಣೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ ಮೇರೆಗೆ ತುಂಗಾಭದ್ರಾ ಮಂಡಳಿಯು ಕ್ರಮ ಕೈಗೊಂಡಿದೆ ಎಂದು ಗಮನ ಸೆಳೆದರು.
ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಮತ್ತು ಆಂಧ್ರ ಸರ್ಕಾರಗಳು ಭರಿಸಬೇಕಾಗಿರುತ್ತದೆ, ಇದಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ 10 ಕೋಟಿ ರು, ಆಂಧ್ರಪ್ರದೇಶ ಸರ್ಕಾರ 20 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ ಆಂಧ್ರಪ್ರದೇಶ ಸರ್ಕಾರ ಬಿಡುಗಡೆ ಮಾಡುವ ಮೊತ್ತವು ಕರ್ನಾಟಕ ಸರ್ಕಾರದ ಹೊಸಪೇಟೆ ಖಜಾನೆಯ ಮೂಲಕವೇ ಬಿಡುಗಡೆ ಮಾಡಲಾಗುತ್ತದೆ. ನಂತರ ಆಂಧ್ರ ಸರ್ಕಾರವು ತುಂಗಾಭದ್ರಾ ಮಂಡಳಿಗೆ ನಿರ್ವಹಣೆ ಮತ್ತು ಸಂಬಳಕ್ಕಾಗಿ ಕರ್ನಾಟಕ ಸರ್ಕಾರದ ಹೊಸಪೇಟೆ ಖಜಾನೆಗೆ 33 ಕೋಟಿ ರು. ಬಿಡುಗಡೆ ಮಾಡಿದೆ. ಈ ಮೊತ್ತವನ್ನು ತುಂಗಾಭದ್ರಾ ಮಂಡಳಿಗೆ ಪಾವತಿಸಬೇಕಾಗಿದೆ ಎಂದು ವಿಜಯೇಂದ್ರ ವಿವರಿಸಿದರು.
23 ಕೋಟಿ ರು. ಬಿಡುಗಡೆ:
ಆದರೆ, ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಈ ಹಿಂದೆ ನೀಡಿದ್ದ 10 ಕೋಟಿ ರು. ಮೊತ್ತವನ್ನು ತಡೆಹಿಡಿದು ಆಂಧ್ರ ಸರ್ಕಾರವು ನೀಡಿದ 33 ಕೋಟಿ ರು.ಗಳಲ್ಲಿ ಕೇವಲ 23 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಕರ್ನಾಟಕ ಸರ್ಕಾರವು ತುಂಗಾಭದ್ರಾ ಗೇಟ್‌ಗಳ ಬದಲಾವಣೆಗೆ ನೀಡಿದ ಹಣ ಹಿಂಪಡೆದಂತಾಯಿತು. ಇದನ್ನು ಗೇಟ್ ತಜ್ಞರಾದ ಕನ್ಹಯ್ಯಾ ನಾಯ್ಡು ಅವರು ತುಂಗಾಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿರುವುದು ತಮಗೆಲ್ಲಾ ತಿಳಿದಿರುವ ವಿಷಯ. ಕನ್ಹಯ್ಯಾ ನಾಯ್ಡು ಅವರಿಗೆ ಈ ನಮ್ಮ ಕರ್ನಾಟಕ ಸರ್ಕಾರವೇ ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು.
ಒಂದು ರೀತಿ ಅರ್ಥಹೀನ ಮಾತು
ನಮ್ಮ ರಾಜ್ಯದಿಂದ ಜಿಎಸ್ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಆಡಳಿತ ಪಕ್ಷದವರ ಮಾತು ಕೇಳುತ್ತಿದ್ದರೆ ನಮ್ಮ ರಾಜ್ಯದ ತೆರಿಗೆ ಹಣದಿಂದ ಕೇಂದ್ರ ಸರ್ಕಾರವು ಬಹಳ ಭ್ರಷ್ಟಾಚಾರ ಮಾಡಿದೆ; ಲೂಟಿ ಮಾಡಿದೆ; ಈ ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇದು ಒಂದು ರೀತಿ ಅರ್ಥಹೀನ ಎಂದು ಇದೇ ವೇಳೆ ವಿಜಯೇಂದ್ರ ಹೇಳಿದರು.
