ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್‌, ಶನಿವಾರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ: ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್‌, ಶನಿವಾರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪತಿ ತೀರಿಕೊಂಡ 3 ದಿನದ ಬಳಿಕ ಈ ಮಹತ್ವದ ವಿದ್ಯಮಾನ ನಡೆಯುವ ಸಾಧ್ಯತೆ ಇದೆ.

ಶನಿವಾರ ಮಧ್ಯಾಹ್ನ 2ಕ್ಕೆ ಶಾಸಕಾಂಗ ಪಕ್ಷದ ಸಭೆ

ಶನಿವಾರ ಮಧ್ಯಾಹ್ನ 2ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಅವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಇದಾದ ನಂತರ ಸಂಜೆ 5ಕ್ಕೆ ಸುನೇತ್ರಾ ಪ್ರಮಾಣವಚನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ಕೈಗೂಡಿದರೆ ಅವರು ರಾಜ್ಯದ ಮೊದಲ ಮಹಿಳಾ ಡಿಸಿಎಂ ಆಗಲಿದ್ದಾರೆ.

ಸುನೇತ್ರಾ ಪ್ರಸ್ತುತ ರಾಜ್ಯಸಭಾ ಸಂಸದೆಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳ ಸದಸ್ಯರಲ್ಲ. ಬಹುಶಃ ಮುಂದಿನ ಉಪಚುನಾವಣೆಯಲ್ಲಿ ಅಜಿತ್‌ ನಿಧನದಿಂದ ತೆರವಾದ ಬಾರಾಮತಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಫೆಬ್ರವರಿ 2ನೇ ವಾರವೇಎನ್‌ಸಿಪಿ ಬಣ ವಿಲೀನ ?

ಬಾರಾಮತಿ: ಅಜಿತ್‌ ಪವಾರ್‌ ಸಾವಿನ ಬೆನ್ನಲ್ಲೇ ಎನ್‌ಸಿಪಿಯ ಎರಡೂ ಬಣಗಳು ಒಂದಾಗುವ ಸುಳಿವು ಸಿಕ್ಕಿದೆ. ಫೆಬ್ರವರಿ 2ನೇ ವಾರ ಈ ಕುರಿತ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಈ ಕುರಿತು ಇತ್ತೀಚೆಗೆ ಎರಡೂ ಬಣಗಳ ನಾಯಕರು ಶರದ್‌ ಪವಾರ್‌ ಜತೆ ಚರ್ಚಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ವಿಲೀನ ಕುರಿತು ಅಧಿಕೃತ ಘೋಷಣೆ ನಿರೀಕ್ಷೆ ಇತ್ತು. ಅಷ್ಟರಲ್ಲೇ ಅಜಿತ್‌ ತೀರಿಕೊಂಡಿದ್ದಾರೆ. ಇದೀಗ ಮುಂದಿನ ವಾರ ಈ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ.