ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಇರುವ ಹಿಂದುಳಿದ ಸಮುದಾಯಗಳಿಗೆ, ಆ ಸಮುದಾಯದ ಅಭಿವೃದ್ಧಿ ನಿಗಮಗಳಿಂದ ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯವನ್ನೂ ಕಲ್ಪಿಸಲಿಲ್ಲ. ಇದ್ದ ಅಲ್ಪ-ಸ್ವಲ್ಪ ಕಲ್ಯಾಣ ಕಾರ್ಯಗಳಿಗೂ ಕಲ್ಲು ಹಾಕಿದೆ ಎಂದು ಶಾಸಕ ಬಿ. ವೈ.ವಿಜಯೇಂದ್ರ ತರಾಟೆ
ವಿಧಾನಸಭೆ : ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಇರುವ ಹಿಂದುಳಿದ ಸಮುದಾಯಗಳಿಗೆ, ಆ ಸಮುದಾಯದ ಅಭಿವೃದ್ಧಿ ನಿಗಮಗಳಿಂದ ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯವನ್ನೂ ಕಲ್ಪಿಸಲಿಲ್ಲ. ಇದ್ದ ಅಲ್ಪ-ಸ್ವಲ್ಪ ಕಲ್ಯಾಣ ಕಾರ್ಯಗಳಿಗೂ ಕಲ್ಲು ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಬಿ. ವೈ.ವಿಜಯೇಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜನಕಲ್ಯಾಣದ ವಿರೋಧಿ ಸರ್ಕಾರ
ಶುಕ್ರವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಒಕ್ಕಲಿಗ, ವೀರಶೈವ, ಬ್ರಾಹ್ಮಣ ಸಮುದಾಯಗಳ ಆರ್ಥಿಕ ದುರ್ಬಲರ ಏಳಿಗೆಗಾಗಿ ಅಸ್ತಿತ್ವಕ್ಕೆ ತಂದಿರುವ ನಿಗಮಗಳಿಂದಲೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ವಿಫಲವಾಗಿರುವುದು ಅತ್ಯಂತ ದೌರ್ಭಾಗ್ಯ. ಕೇವಲ ಪಂಚ ಭಾಗ್ಯಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ, ಆ ಪಂಚ ಭಾಗ್ಯಗಳಿಗೂ ಸರಿಯಾದ ನ್ಯಾಯ ಒದಗಿಸದೇ ಈ ಸರ್ಕಾರ ಜನಕಲ್ಯಾಣದ ವಿರೋಧಿ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಆರ್ಥಿಕವಾಗಿ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಮಡಿವಾಳ, ವಿಶ್ವಕರ್ಮ, ಸವಿತಾ, ಹಡಪದ, ಅಲೆಮಾರಿ ಸಮುದಾಯಗಳು, ಅಂಬಿಗ, ಗೊಲ್ಲ, ಗಾಣಿಗ, ತಿಗಳ, ನೇಕಾರ, ಕುಂಬಾರ ಮೊದಲಾದ ಸಮುದಾಯಗಳಿಗೆ ಬಿಡುಗಾಸಿನಷ್ಟೂ ಈ ಸರ್ಕಾರದಿಂದ ಉಪಯೋಗವಾಗಿಲ್ಲ. ಈ ಸಮುದಾಯಗಳ ನಿಗಮಗಳಿಗೆ ನೀಡಿರುವ ಅನುದಾನಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಇದೇ ಪರಿಸ್ಥಿತಿಯನ್ನು ಕುರುಬ ಹಾಗೂ ಈಡಿಗ ಸಮುದಾಯಗಳೂ ಅನುಭವಿಸುತ್ತಿವೆ ಎಂದು ಕಿಡಿಕಾರಿದರು.
ಅಹಿಂದ ಹೆಸರನ್ನು ಹೇಳಿಕೊಂಡು ರಾಜಕೀಯವಾಗಿ ಗುರುತಿಸಿಕೊಂಡ ಸಿದ್ದರಾಮಯ್ಯನವರು ಇಂದು ‘ಹಿಂದ’ ವರ್ಗವನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಿದ್ದಾರೆ. ಶೋಷಿತ ಸಮುದಾಯಗಳ ಏಳಿಗೆಗಾಗಿ ಇರುವ ಡಾ. ಅಂಬೇಡ್ಕರ್ ನಿಗಮ, ಬಾಬೂ ಜಗಜೀವನ್ ರಾವ್ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಸ್ಥಿತಿಯೂ ಇದೇ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಸಮುದಾಯಗಳನ್ನು ಸ್ವಾತಂತ್ರ್ಯಾನಂತರ ಬಳಸಿಕೊಂಡು ಶೋಷಣೆ ಮಾಡುತ್ತಿದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಈ ಸರ್ಕಾರಕ್ಕೆ ಆ ಸಮುದಾಯಗಳ ವೋಟ್ ಮಾತ್ರಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಯಾವ ಪುರುಷಾರ್ಥಕ್ಕೆ ಈ ನಿಗಮಗಳು ಅಸ್ತಿತ್ವದಲ್ಲಿದೆ
ಯಾವ ಪುರುಷಾರ್ಥಕ್ಕೆ ಈ ನಿಗಮಗಳು ಅಸ್ತಿತ್ವದಲ್ಲಿದೆ ಎಂಬ ಪ್ರಶ್ನೆ ಈ ಸಮುದಾಯದ ಜನರನ್ನು ಕಾಡುತ್ತಿದೆ. ಹೆಸರಿಗಷ್ಟೇ ಅಸ್ತಿತ್ವ ಪಡೆದುಕೊಂಡಿರುವ ಈ ನಿಗಮಗಳಿಂದ ಈ ಸಮುದಾಯಗಳಿಗೆ ಕನಿಷ್ಟ ಮಟ್ಟದ ಸಹಾಯವೂ ಆಗುತ್ತಿಲ್ಲ ಎಂದರೆ ಈ ನಿಗಮಗಳ ಅಸ್ತಿತ್ವವನ್ನು ತೋರಿಕೆಗಾಗಿ ಸರ್ಕಾರ ಇಟ್ಟುಕೊಂಡಂತೆ ಕಾಣುತ್ತದೆ. ಈ ಹಿಂದಿನ ನಮ್ಮ ಬಿಜೆಪಿ ಸರ್ಕಾರ ಘೋಷಿಸಿದ್ದ ಅನುದಾನವನ್ನು ನಮ್ಮ ಸರ್ಕಾರ ಸಂಪೂರ್ಣವಾಗಿ ಬಿಡುಗಡೆ ಮಾಡಿತ್ತು. ಕೊರೋನಾದಂತಹ ಸಂಕಷ್ಟ ಕಾಲದಲ್ಲಿಯೂ ನಾವು ಹಿಂದುಳಿದ ಸಮುದಾಯಗಳ ಕುರಿತು ಗರಿಷ್ಟ ಕಾಳಜಿಯನ್ನು ತೋರಿಸಿ ನಮ್ಮ ಬದ್ಧತೆಯನ್ನು ಮೆರೆದಿದ್ದೇವೆ ಎಂದು ಸದನದ ಗಮನ ಸೆಳೆದರು.
ಈ ಸರ್ಕಾರ, ಆಯವ್ಯಯದಲ್ಲಿ ಹಿಂದಿನ ನಮ್ಮ ಬಿಜೆಪಿ ಸರ್ಕಾರಕ್ಕಿಂತಲೂ ಹೆಚ್ಚು ಅನುದಾನವನ್ನು ಘೋಷಿಸಬೇಕಿತ್ತು, ಇದು ಜನರ ನಿರೀಕ್ಷೆ ಕೂಡ ಆಗಿತ್ತು. ಆದರೆ ನಾವು ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಶೇ.50ರಷ್ಟೂ ಘೋಷಿಸಲಿಲ್ಲ. ಘೋಷಿಸಿದ ಅನುದಾನದ ಪೈಕಿ ಶೇ.50 ರಷ್ಟು ಮಾತ್ರ ಬಿಡುಗಡೆ ಮಾಡಿ, ಹಿಂದುಳಿದ ಸಮುದಾಯಗಳನ್ನು ವಂಚಿಸಿದೆ. ಈ ಕಾರಣದಿಂದ 2023-24 ರಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ನಿಗಮಗಳಿಂದಲೂ ವರ್ಷದ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿಲ್ಲ. ಇದು ಬಹುದೊಡ್ಡ ಅನ್ಯಾಯ ಹಾಗೂ ದುರಂತ. ಸ್ವಯಂ ಉದ್ಯೋಗ ಸಾಲ ಯೋಜನೆ, ಆರಿವು ಶಿಕ್ಷಣ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆಯಾಗಲೀ ಒಬ್ಬನೇ ಒಬ್ಬ ಫಲಾನುಭವಿಗೂ ಈ ಸರ್ಕಾರ ಕಲ್ಪಿಸಲಿಲ್ಲ. ಈ ಸರ್ಕಾರವನ್ನು ಬೆಂಬಲಿಸಿದ್ದ ಹಿಂದುಳಿದ ಸಮುದಾಯ ಹಾಗೂ ಆರ್ಥಿಕ ದುರ್ಬಲ ವರ್ಗಗಳ ನಿರೀಕ್ಷೆ ಹಾಗೂ ಕನಸುಗಳನ್ನು ನುಚ್ಚುನೂರು ಮಾಡಿದೆ ಎಂದು ತರಾಟೆಗೆ ಟೀಕಿಸಿದರು.
2022-23 ರ ನಮ್ಮ ಸರ್ಕಾರ ಡಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ 190 ಕೋಟಿ ರು. ಘೋಷಿಸಿ, ಅಷ್ಟೂ ಹಣವನ್ನು ಬಿಡುಗಡೆ ಮಾಡಿತು. ಆದರೆ ಈ ಕಾಂಗ್ರೆಸ್ ಸರ್ಕಾರ 2023-24 ರಲ್ಲಿ 100 ಕೋಟಿ ರು. ಅನುದಾನವನ್ನು ಘೋಷಿಸಿ, ಬಿಡುಗಡೆ ಮಾಡಿದ್ದು ಕೇವಲ 50 ಕೋಟಿ ರು.ಮಾತ್ರ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ರು. ಬಿಡುಗಡೆ ಮಾಡಿದರೆ, ಈ ಸರ್ಕಾರ ಕೇವಲ 13 ಕೋಟಿ ರು. ಘೋಷಿಸಿ ಕೇವಲ 6.50 ಕೋಟಿ ರು. ಬಿಡುಗಡೆ ಮಾಡಿದೆ. ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ ನಾವು ಬಿಡುಗಡೆ ಮಾಡಿದ್ದು 25 ಕೋಟಿ ರು., ಈ ಸರ್ಕಾರ ಬಿಡುಗಡೆ ಮಾಡಿದ್ದು 4.50 ಕೋಟಿ ರು., ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನಾವು 15 ಕೋಟಿ ರು. ಬಿಡುಗಡೆ ಮಾಡಿದರೆ ಈ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 4 ಕೋಟಿ, ಮರಾಠ ಅಭಿವೃದ್ಧಿ ನಿಗಮಕ್ಕೆ ನಾವು 100 ಕೋಟಿ ರು.ಬಿಡುಗಡೆ ಮಾಡಿದರೆ ಈ ಸಾಕಾರ ಬಿಡುಗಡೆ ಮಾಡಿದ್ದು ಕೇವಲ 25 ಕೋಟಿ ರು., ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ನಾವು 60 ಕೋಟಿ ರು.ಬಿಡುಗಡೆ ಮಾಡಿದರೆ, ಈ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 30 ಕೋಟಿ ರು., ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನಾವು 100 ಕೋಟಿ ರು.ಬಿಡುಗಡೆ ಮಾಡಿದರೆ ಈ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 30 ಕೋಟಿ ರು. ಹೀಗೆ ಈ ಸರ್ಕಾರ ಇತರೆ ನಿಗಮಗಳಿಗೂ ಅನುದಾನ ನೀಡುವಲ್ಲಿ ಅನ್ಯಾಯಮಾಡಿದೆ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣವಾಗಿ ಈ ನಿಗಮಗಳನ್ನು ಕಡೆಗಣಿಸಿದ ಪರಿಣಾಮ ಸ್ವಾವಲಂಬಿ ಬದುಕು ತವಕಿಸುವ ಆರ್ಥಿಕ ದುರ್ಬಲರು, ಕುಶಲಕರ್ಮಿಗಳು, ಕೌಶಲ್ಯ ಪರಿಣಿತರು, ನಿರುದ್ಯೋಗಿ ಯುವ ಸಮುದಾಯ, ಸ್ವಾವಲಂಬಿ ಮಹಿಳಾ ಸಮುದಾಯ, ಸಂಪೂರ್ಣ ನಿರಾಶೆ ಪಡುವಂತಾಯಿತು. ಇವರಿಗೆ ಯಾವ ಭಾಗ್ಯವನ್ನೂ ಕಲ್ಪಿಸದೇ ಇವರ ಬದುಕಿನ ಭಾಗ್ಯದ ಬಾಗಿಲನ್ನು ಮುಚ್ಚಿ ಕತ್ತಲಿನಲ್ಲಿ ದೂಡಿದೆ. ಈ ಅಭಿವೃದ್ಧಿಗಳ ಮೂಲಕ ಆರ್ಥಿಕ ಚೈತನ್ಯ ಪಡೆಯಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ವಿದ್ಯಾರ್ಥಿ ಸಮುದಾಯ, ಗಂಗಾ ಕಲ್ಯಾಣ ಯೋಜನೆಯ ಮೂಲಕ ತಮ್ಮ ಭೂಮಿ ಹಸನು ಮಾಡಿಕೊಳ್ಳಬಹುದು ಎಂದು ಕಂಡಿದ್ದ ಸಣ್ಣ ಹಿಡುವಳಿದಾರ ರೈತ ಸಮುದಾಯ ಸಂಪೂರ್ಣ ನಿರಾಶೆ ಹೊಂದುವಂತಾಯಿತು ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದರು
ದುರ್ಬಲರ ಏಳಿಗೆಗೆ ನಿಗಮ ಸ್ಥಾಪಿಸಿದರೂ ಅದಕ್ಕೆ ಹಣ ನೀಡದೇ ಸರ್ಕಾರ ಅನ್ಯಾಯ
ತಮ್ಮ ಸರ್ಕಾರ ನೀಡಿದ ಅನುದಾನಕ್ಕಿಂತಲೂ ಕಡಿಮೆ ನೀಡಿದ್ದಾಗಿ ಬಿವೈವಿ ಆಕ್ರೋಶ
ಅಹಿಂದ ಹೆಸರಲ್ಲಿ ರಾಜಕೀಯ ಮಾಡುವ ಸಿಎಂ ಸಿದ್ದುರಿಂದ ಸಮುದಾಯ ಕಡೆಗಣನೆ
ಪಂಚಗ್ಯಾರಂಟಿ ಘೋಷಿಸಿ ಅದನ್ನೂ ಸರಿಯಾಗಿ ಜಾರಿಮಾಡದೇ ಸರ್ಕಾರ ವಿಫಲ
ವಿಧಾನಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ

