ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಪತನವಾಗಿದ್ದು, ಅಪಘಾತದಲ್ಲಿ ಪವಾರ್ ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಬಾರಾಮತಿ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಪತನವಾಗಿದ್ದು, ಅಪಘಾತದಲ್ಲಿ ಪವಾರ್ ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಫೆ.5ರ ಜಿಲ್ಲಾ ಪರಿಷತ್ ಚುನಾವಣೆ ಹಿನ್ನೆಲೆ ಪುಣೆಯಲ್ಲಿ ಬುಧವಾರ 4 ರ್‍ಯಾಲಿಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಅಜಿತ್ ಪವಾರ್‌ ಮುಂಬೈನಿಂದ ಹೊರಟಿದ್ದರು. ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಲ್ಯಾಂಡ್ ಆಗುವ ಮುನ್ನವೇ ಪಕ್ಕದ ದುರ್ಗಮ ಖಾಲಿ ಜಾಗೆಯಲ್ಲಿ ಬಿದ್ದು ದುರಂತ ಸಂಭವಿಸಿದೆ. ವಿಮಾನದಲ್ಲಿ ಪವಾರ್‌, ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಇಬ್ಬರು ಮಹಿಳಾ ಪೈಲಟ್‌ ಹಾಗೂ ಒಬ್ಬ ವಿಮಾನ ಸಿಬ್ಬಂದಿ ಸಹ ಇದ್ದರು. ಐವರೂ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಘಟನೆಯ ಬಗ್ಗೆ ಕೇಂದ್ರ ವಿಮಾನಯಾನ ಸಚಿವಾಲಯ ವಿಸ್ತೃತ ತನಿಖೆಗೆ ಆದೇಶಿಸಿದೆ. ಈ ನಡುವೆ, ಪವಾರ್‌ ಅವರ ಅಂತ್ಯಕ್ರಿಯೆ ಬಾರಾಮತಿಯಲ್ಲಿ ಗುರುವಾರ ನಡೆಯಲಿದೆ.

ಆಗಿದ್ದೇನು?:

VI-ಎಸ್‌ಎಸ್‌ಕೆ ಸಂಖ್ಯೆಯ ಲಿಯರ್‌ಜೆಟ್ ವಿಮಾನದಲ್ಲಿ ಪವಾರ್‌ ಪ್ರಯಾಣಿಸುತ್ತಿದ್ದರು. ಈ ವಿಮಾನವನ್ನು ದೆಹಲಿ ಮೂಲದ ವಿಎಸ್‌ಆರ್ ವೆಂಚರ್ಸ್‌ ನಿರ್ವಹಿಸುತ್ತದೆ. ವಿಮಾನವು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಟೇಕಾಫ್ ಆಗಿ ಬಾರಾಮತಿಯತ್ತ ಹೊರಟಿದೆ. ಆದರೆ 8.45ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಗಿದೆ. ಅದಾಗಿ 5 ನಿಮಿಷಕ್ಕೆ, ಅಂದರೆ ಬೆಳಿಗ್ಗೆ 8.50ಕ್ಕೆ ಪತನಗೊಂಡಿದೆ.

‘ವಿಮಾನವು ಬೆಳಿಗ್ಗೆ 8:18ಕ್ಕೆ ಬಾರಾಮತಿ ಏರ್ ಟ್ರಾಫಿಕ್ ಕಂಟ್ರೋಲ್‌ನ (ಎಟಿಸಿ) ಸಂಪರ್ಕಕ್ಕೆ ಬಂತು. ಬಾರಾಮತಿಯಿಂದ 30 ನಾಟಿಕಲ್ ಮೈಲಿ ದೂರದಲ್ಲಿರುವಾಗ ಅದು ಮತ್ತೊಮ್ಮೆ ಸಂಪರ್ಕಕ್ಕೆ ಬರಬೇಕಾಗಿತ್ತು. ಆದರೆ ಅದನ್ನು ಪುಣೆಯಿಂದ ಸಂಪರ್ಕಿಸಲಾಯಿತು. ಹವಾಮಾನವನ್ನು ನೋಡಿಕೊಂಡು, ಪೈಲಟ್‌ ವಿವೇಚನೆಯನ್ನು ಬಳಸಿ ಲ್ಯಾಂಡ್ ಮಾಡುವಂತೆ ಸೂಚಿಸಲಾಯಿತು. ಪೈಲಟ್‌ ಗಾಳಿ ಮತ್ತು ಗೋಚರತೆ ಬಗ್ಗೆ ವಿಚಾರಿಸಿದರು. ವಾಯು ಪರಿಸ್ಥಿತಿ ಶಾಂತವಾಗಿದ್ದು, ಗೋಚರತೆ ಸುಮಾರು 3,000 ಮೀ. ಇದೆ ಎಂದು ಪೈಲಟ್‌ಗೆ ಮಾಹಿತಿ ನೀಡಲಾಯಿತು’ ಎಂದು ಎಟಿಸಿ ನಿರ್ವಹಿಸುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಾದ ನಂತರ ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿದ್ದು, ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ. ವಿಮಾನದಲ್ಲಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 ಎಲ್ಲಿ?: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯ ಏರ್‌ಸ್ಟ್ರಿಪ್‌ನಲ್ಲಿ.

ಯಾವಾಗ?: ಬುಧವಾರ ಬೆಳಿಗ್ಗೆ 8.50ಕ್ಕೆ ಲ್ಯಾಂಡ್‌ ಆಗುವ ವೇಳೆ.

ಏನಾಯ್ತು?: ಚುನಾವಣಾ ಪ್ರಚಾರ ನಡೆಸಲು ಮುಂಬೈನಿಂದ ಪುಣೆಗೆ ಆಗಮಿಸುತ್ತಿದ್ದ ಪವಾರ್‌. ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಲ್ಯಾಂಡ್‌ ಆಗುವ ವೇಳೆ ಪತನ. ಈ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪವಾರ್‌ ಸೇರಿ 5 ಮಂದಿ ಜೀವಂತ ದಹನ.

ಯಾರ್‍ಯಾರಿದ್ದರು?: 

ಡಿಸಿಎಂ ಅಜಿತ್‌ ಪವಾರ್‌, ಪೈಲಟ್ ಶಾಂಭವಿ ಪಾಠಕ್, ಫ್ಲೈಟ್ ಅಟೆಂಡೆಂಟ್‌ ಪಿಂಕಿ ಮಾಲಿ, ಕ್ಯಾಪ್ಟನ್‌ ಸುಮಿತ್‌ ಕಪೂರ್‌ ಹಾಗೂ ಭದ್ರತಾ ಸಿಬ್ಬಂದಿ ವಿಂದೀಪ್ ಜಾಧವ್‌.

ಅಜಿತ್‌ ಅಗಲಿಕೆಯಿಂದ ಎನ್‌ಸಿಪಿ ಅತಂತ್ರ 

ಮುಂಬೈ: ಅಜಿತ್‌ ಪವಾರ್‌ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್‌ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ. ಈ ನಡುವೆ ಅಜಿತ್‌ ಪತ್ನಿ, ರಾಜ್ಯಸಭಾ ಸದಸ್ಯೆ ಸುನೇತ್ರಾಗೆ ಪಕ್ಷದ ಚುಕ್ಕಾಣಿ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಮತ್ತೊಂದೆಡೆ ಅಜಿತ್‌ ಅನುಪಸ್ಥಿತಿಯಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಆತಂಕದಿಂದ ಶಾಸಕರು ಮರಳಿ ಶರದ್‌ ಪವಾರ್‌ ಬಣದ ಎನ್‌ಸಿಪಿ, ಬಿಜೆಪಿ ಅಥವಾ ಶಿವಸೇನೆಯತ್ತ ಮುಖಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ವಿಮಾನ ಪತನಕ್ಕೆ

ಬಲಿಯಾದ ಗಣ್ಯರು

ಸಂಜಯ್‌ ಗಾಂಧಿ (1980)

ಮಾಧವರಾವ್‌ ಸಿಂಧಿಯಾ (2001)

ಜಿ.ಎಂ.ಸಿ. ಬಾಲಯೋಗಿ (2002)

ನಟಿ ಸೌಂದರ್ಯ (2004)

ಒ.ಪಿ. ಜಿಂದಾಲ್‌ (2005)

ವೈ.ಎಸ್‌. ರಾಜಶೇಖರ ರೆಡ್ಡಿ (2009)

ದೋರ್ಜಿ ಖಂಡು (2011)

ಜ। ಬಿಪಿನ್‌ ರಾವತ್‌ (2021)

ವಿಜಯ ರೂಪಾನಿ (2025)

ಅಪಘಾತ ತನಿಖೆ ಕೋರಿದ ದೀದಿ

ವಿರುದ್ಧ ಶರದ್, ಫಡ್ನವೀಸ್‌ ಕಿಡಿ

ಬಾರಾಮತಿ: ಶರದ್‌ ಪವಾರ್‌ ಬಲಿ ಪಡೆದ ವಿಮಾನ ಅಪಘಾತದ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಸುಪ್ರೀಂಕೋರ್ಟ್‌ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಒತ್ತಾಯಿಸಿದ್ದಾರೆ. ಆದರೆ ಇದು ಆಕಸ್ಮಿಕ ಘಟನೆ. ಇದರಲ್ಲಿ ರಾಜಕೀಯ ಬೇಡ ಎಂದು ಅಜಿತ್‌ ಸಂಬಂಧಿ ಶರದ್‌ ಪವಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ತುಂಬಾ ಕೆಳಮಟ್ಟಕ್ಕಿಳಿದು ಆರೋಪ ಮಾಡುತ್ತಿದ್ದಾರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ತಿರುಗೇಟು ನೀಡಿದ್ದಾರೆ.