12ನೇ ದಿನದ ಸಂಘರ್ಷದಲ್ಲಿ ಇರಾನ್‌ ಎಂದಿನಂತೆ ಹೋರ್ಮುಜ್‌ ಜಲಸಂಧಿ ಮತ್ತು ನೆರೆರಾಷ್ಟ್ರಗಳ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಮುಂದುವರೆಸಿದೆ.   ಇರಾನ್‌, ಇದೀಗ ಭಾರತಕ್ಕೆ ಬರುತ್ತಿದ್ದ ಹಡಗೊಂದರ ಮೇಲೆಯೂ ಆಕ್ರಮಣ ಮಾಡಿದೆ.

ದುಬೈ: 12ನೇ ದಿನದ ಸಂಘರ್ಷದಲ್ಲಿ ಇರಾನ್‌ ಎಂದಿನಂತೆ ಹೋರ್ಮುಜ್‌ ಜಲಸಂಧಿ ಮತ್ತು ನೆರೆರಾಷ್ಟ್ರಗಳ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಮುಂದುವರೆಸಿದೆ. ಇಷ್ಟು ದಿನ ಅಮೆರಿಕದ ಮಿತ್ರದೇಶಗಳ ಮೇಲಷ್ಟೇ ದಾಳಿ ಮಾಡುತ್ತಿದ್ದ ಇರಾನ್‌, ಇದೀಗ ಭಾರತಕ್ಕೆ ಬರುತ್ತಿದ್ದ ಹಡಗೊಂದರ ಮೇಲೆಯೂ ಆಕ್ರಮಣ ಮಾಡಿದೆ. ಅತ್ತ ದುಬೈನಲ್ಲಿ ಕ್ಷಿಪಣಿ ದಾಳಿ ಪರಿಣಾಮ ಭಾರತೀಯರೊಬ್ಬರು ಗಾಯಗೊಂಡಿದ್ದಾರೆ.

ಭಾರತಕ್ಕೆ ಬರುತ್ತಿದ್ದ ಹಡಗು:

ಹೋರ್ಮುಜ್‌ ಮೂಲಕ ಸಾಗಿದ ಹಡಗೊಂದಕ್ಕೆ ಬೆಂಗಾವಲು ನೀಡಿದ್ದಾಗಿ ಅಮೆರಿಕ ಹೇಳಿತ್ತು. ಅದರ ಬೆನ್ನಲ್ಲೇ ಇರಾನ್‌, ಯುಎಇಯ ಖಲೀಫಾ ಬಂದರಿನಿಂದ ಗುಜರಾತ್‌ನ ಖಂಡಾಲಾ ಬಂದರಿಗೆ ಸರಕು ಹೊತ್ತು ಬರುತ್ತಿದ್ದ ಥಾಯ್ಲೆಂಡ್‌ ಧ್ವಜವಿದ್ದ ಹಡಗಿನ ಮೇಲೆ ಹೋರ್ಮುಜ್‌ ಜಲಸಂಧಿಯಲ್ಲಿ ದಾಳಿಯಾಗಿದೆ. ಪರಿಣಾಮ ದಟ್ಟ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಮಯೂರಿ ನಾರಿ ಹೆಸರಿನ ನೌಕೆಯಲ್ಲಿದ್ದ 20 ನಾವಿಕರನ್ನು ತೆಪ್ಪಗಳ ಮೂಲಕ ರಕ್ಷಿಸಲಾಗಿದ್ದು, ಇನ್ನೂ ಮೂವರು ನೌಕೆಯಲ್ಲೇ ಭಾಕಿಯಾಗಿದ್ದಾರೆ. ಅವರ ಸ್ಥಿತಿಯ ಬಗ್ಗೆ ತಿಳಿದಿಲ್ಲ ಎಂದು ಥಾಯ್ಲೆಂಡ್‌ ನೌಕಾಪಡೆ ತಿಳಿಸಿದೆ.

ಅತ್ತ ಒಮಾನ್‌ ಕೊಲ್ಲಿಯ ಉತ್ತರ ಭಾಗದಲ್ಲಿ ಸಾಗುತ್ತಿದ್ದ ವೇಳೆ ಬ್ರಿಟನ್‌ನ ಸರಕು ಸಾಗಣೆ ನೌಕೆಯೊಂದಕ್ಕೆ ಕ್ಷಿಪಣಿ ಬಂದಪ್ಪಳಿಸಿದೆ. ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ದುಬೈ ಏರ್ಪೋರ್ಟ್‌ ದಾಳಿ:

ವಿಶ್ವದ ವ್ಯಸ್ತ ವಿಮಾನ ನಿಲ್ದಾಣವಾದ ದುಬೈನ್‌ ಅಂತಾರಾಷ್ಟ್ರೀಯ ಏರ್ಪೋರ್ಟ್‌ ಮೇಲೆ ಇರಾನ್‌ ಡ್ರೋನ್‌ ದಾಳಿ ನಡೆಸಿದೆ. ಪರಿಣಾಮ ಓರ್ವ ಭಾರತೀಯ ಸೇರಿ 4 ಮಂದಿ ಗಾಯಗೊಂಡಿದ್ದಾರೆ. ಇದರ ಹೊರತಾಗಿಯೂ ವಿಮಾನ ಸಂಚಾರವನ್ನು ಮುಂದುವರೆಸಲಾಗಿದೆ.

ಇಸ್ರೇಲ್‌ ದಾಳಿ:

ಅತ್ತ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿರುವ ಇಸ್ರೇಲ್‌, ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ದಕ್ಷಿಣ ಹಾಗೂ ಪೂರ್ವ ಭಾಗದ ಮೇಲಿನ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.