ಗಗನಮುಖಿಯಾಗಿದ್ದ ಚಿನ್ನದ ದರದಲ್ಲಿ ಕಳೆದ 3 ತಿಂಗಳಿನಿಂದ ನಿರಂತರ ಇಳಿಕೆ ಕಂಡುಬರುತ್ತಿದ್ದು, ಆಭರಣ ಪ್ರಿಯರು ಹಾಗೂ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. 3 ತಿಂಗಳಲ್ಲಿ ಸುಮಾರು 30 ಸಾವಿರ ರು.ನಷ್ಟು 10 ಗ್ರಾಂ ಚಿನ್ನದ ದರ ಕುಸಿದಿದೆ.
ನವದೆಹಲಿ: ಗಗನಮುಖಿಯಾಗಿದ್ದ ಚಿನ್ನದ ದರದಲ್ಲಿ ಕಳೆದ 3 ತಿಂಗಳಿನಿಂದ ನಿರಂತರ ಇಳಿಕೆ ಕಂಡುಬರುತ್ತಿದ್ದು, ಆಭರಣ ಪ್ರಿಯರು ಹಾಗೂ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. 3 ತಿಂಗಳಲ್ಲಿ ಸುಮಾರು 30 ಸಾವಿರ ರು.ನಷ್ಟು 10 ಗ್ರಾಂ ಚಿನ್ನದ ದರ ಕುಸಿದಿದೆ. ಯುದ್ಧದ ಪರಿಸ್ಥಿತಿ ತಿಳಿ ಆಗಿರುವುದು ಹಾಗೂ ಚಿನ್ನ ಖರೀದಿ ಕಡಿಮೆ ಮಾಡಿ ದರ ನಿಯಂತ್ರಣಕ್ಕೆ ಸಹಕರಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಕಳೆದ 3 ತಿಂಗಳ (ಸೆಪ್ಟೆಂಬರ್‌ನಿಂದ ನವೆಂಬರ್) ಅವಧಿಯಲ್ಲಿ ಬೆಂಗಳೂರು ಮಾರುಕಟ್ಟೆಯಲ್ಲಿ 24 ಹಾಗೂ 22 ಕ್ಯಾರಟ್ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಕಳೆದ ಆಗಸ್ಟ್‌ನಲ್ಲಿ 10 ಗ್ರಾಂಗೆ 1,55,000 ರು. ಗಡಿ ದಾಟಿದ್ದ 24 ಕ್ಯಾರಟ್ ಚಿನ್ನದ ದರ, ಹಂತ ಹಂತವಾಗಿ ಕುಸಿಯುತ್ತಾ ನವೆಂಬರ್ ವೇಳೆಗೆ 1,25,570 ರು.ಗೆ ಬಂದು ನಿಂತಿದೆ. ಅದೇ ರೀತಿ, 1,42,090 ರು.ನಷ್ಟಿದ್ದ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,15,100 ರು.ಗೆ ಇಳಿದಿದೆ. ಕೇವಲ 90 ದಿನಗಳ ಅಂತರದಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 27,000 ರಿಂದ 29,400 ರು.ಗೂ ಹೆಚ್ಚು ಇಳಿಕೆಯಾಗಿರುವುದು ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.
24 ಕ್ಯಾರೆಟ್ ಹಂತ ಹಂತವಾಗಿ ಕುಸಿತ ಹೇಗೆ?:
2026ರ ಆಗಸ್ಟ್‌ನಲ್ಲಿ 10 ಗ್ರಾಂಗೆ ಸರಾಸರಿ 1,55,000 ರು.ನಷ್ಟಿದ್ದ 24 ಕ್ಯಾರಟ್ ಚಿನ್ನದ ದರ, ಸೆಪ್ಟೆಂಬರ್‌ನಲ್ಲಿ ಸರಾಸರಿ 1,53,730 ರು.ಗೆ ಇಳಿಯಿತು.
ಅಕ್ಟೋಬರ್ ತಿಂಗಳಲ್ಲಿ ಈ ಇಳಿಕೆಯ ವೇಗ ಹೆಚ್ಚಾಗಿ ಸರಾಸರಿ ದರ 1,46,970 ರು.ಗೆ ಕುಸಿಯಿತು ಮತ್ತು ತಿಂಗಳ ಅಂತ್ಯಕ್ಕೆ 1,38,880 ರು.ಗೆ ತಲುಪಿತು.
ನವೆಂಬರ್‌ನಲ್ಲಿ ಸರಾಸರಿ ದರ 1,38,420 ರು.ನಷ್ಟಿದ್ದು, ನವೆಂಬರ್ 21ರ ಹೊತ್ತಿಗೆ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 1,25,570 ರು.ಗೆ ಇಳಿದಿದೆ.
22 ಕ್ಯಾರೆಟ್ ಹಂತ ಹಂತ ಕುಸಿತ ಹೇಗೆ?:
ಇನ್ನು ಬೆಂಗಳೂರಲ್ಲಿ 22 ಕ್ಯಾರಟ್‌ನ ಆಭರಣ ಚಿನ್ನದ ದರದಲ್ಲೂ ಇದೇ ರೀತಿಯ ಇಳಿಕೆ ದಾಖಲಾಗಿದೆ.
ಆಗಸ್ಟ್‌ನಲ್ಲಿ 10 ಗ್ರಾಂಗೆ ಸರಾಸರಿ 1,42,090 ರು.ನಷ್ಟಿದ್ದ 22 ಕ್ಯಾರಟ್ ಚಿನ್ನವು ಸೆಪ್ಟೆಂಬರ್‌ನಲ್ಲಿ ಸರಾಸರಿ 1,40,910 ರು.ಗೆ ಮತ್ತು ಅಕ್ಟೋಬರ್‌ನಲ್ಲಿ ಸರಾಸರಿ 1,34,720 ರು.ಗೆ ತಗ್ಗಿತು.
ನವೆಂಬರ್ ತಿಂಗಳಲ್ಲಿ ಏರಿಳಿತಗಳ ನಡುವೆಯೇ ದರ ಮತ್ತಷ್ಟು ಇಳಿಕೆಯಾಗಿ, ನವೆಂಬರ್ 21ರ ವೇಳೆಗೆ 10 ಗ್ರಾಂ 22 ಕ್ಯಾರಟ್ ಚಿನ್ನ 1,15,100 ರು.ಗೆ ಬಂದು ನಿಂತಿದೆ.
ಈ ಮೂಲಕ 3 ತಿಂಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 26,990 ರು.ನಷ್ಟು ಇಳಿಕೆಯಾಗಿದೆ.

