-ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಲ್ಲಿ ಔಟಾಫ್ ಸ್ಟಾಕ್-ತಿಂಗಳ ಬದಲು ದಿನವೊಂದಕ್ಕೆ 70 ಒಲೆ ಬಿಕರಿ
ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆಯ ಕಾರಣ ಭಾರತದಲ್ಲಿ ಉಂಟಾಗಿರುವ ಎಲ್‌ಪಿಜಿ ಅಭಾವವು ಇಂಡಕ್ಷನ್ ಸ್ಟವ್‌ಗಳಿಗೆ (ಎಲೆಕ್ಟ್ರಿಕ್ ಒಲೆ) ಎಲ್ಲಿಲ್ಲದ ಬೇಡಿಕೆ ಸೃಷ್ಟಿಸಿದೆ. ಜನ ಆನ್ಲೈನ್‌ನಲ್ಲಿ ಈ ಒಲೆಗಳ ಖರೀದಿಗೆ ಮುಗಿಬಿದ್ದಿದ್ದು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೇಡಿಕೆ ಶೇ.300ರಷ್ಟು ಏರಿಕೆಯಾಗಿದೆ.ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿ ಮುಂತಾದ ಆನ್ಲೈನ್ ವೇದಿಕೆಗಳ ಮೂಲಕ ಜನ ಇಂಡಕ್ಷನ್ ಸ್ಟವ್‌ಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ಇವುಗಳಲ್ಲಿ ಬಹುತೇಕ ಕಡೆ ಲಭ್ಯತೆ ಇಲ್ಲವಾಗಿದೆ. ಅಮೆಜಾನ್‌ನಲ್ಲಿ ಕೆಂಟ್ ಮತ್ತು ಉಷಾ ಬ್ರ್ಯಾಂಡ್‌ನ ಕೆಲವು ಒಲೆಗಳು ಮಾತ್ರ ಲಭ್ಯವಿದ್ದು, ಇತರ ಬ್ರ್ಯಾಂಡ್‌ಗಳು ಖಾಲಿಯಾಗಿವೆ. ಝೆಪ್ಟೋ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಂತಾದ ಕ್ವಿಕ್ ಕಾಮರ್ಸ್ ಆ್ಯಪ್‌ಗಳಲ್ಲೂ ಇದೇ ಸ್ಥಿತಿಯಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಕಳೆದ 4-5 ದಿನಗಳಲ್ಲಿ ಮಾರಾಟ 4 ಪಟ್ಟು ಹೆಚ್ಚಾಗಿದ್ದು, ಒಲೆಗಳ ಪೂರೈಕೆಯೇ ಕಷ್ಟವಾಗಿದೆ. ಅದೇ ರೀತಿ, ಪಿಜನ್ ಮತ್ತು ಗಿಲ್ಮಾದಂತಹ ಬ್ರ್ಯಾಂಡ್‌ಗಳ ಅಡಿಯಲ್ಲಿ ಅಡುಗೆ ಸಲಕರಣೆಗಳನ್ನು ಮಾರಾಟ ಮಾಡುವ ಸ್ಟೊವ್‌ಕ್ರಾಫ್ಟ್ ಲಿ. ತನ್ನ ಆನ್‌ಲೈನ್ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿರುವುದಾಗಿ ತಿಳಿಸಿದೆ.
ಎಲೆಕ್ಟ್ರಾನಿಕ್ ಹಾಗೂ ಹೋಂ ಅಪ್ಲೈಯನ್ಸಸ್ ಸಲಕರಣೆ ಮಾರಾಟಗಾರ ಕ್ರೋಮಾ, ‘ನಮ್ಮಲ್ಲಿನ ಇಂಡಕ್ಷನ್ ಸ್ಟವ್ ಮಾರಾಟ 3 ಪಟ್ಟು ಹೆಚ್ಚಿದೆ’ ಎಂದಿದೆ.ಇನ್ನು ತಿಂಗಳಿಗೆ 70 ಇಂಡಕ್ಷನ್ ಸ್ಟವ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ದಿನವೊಂದಕ್ಕೆ 70 ಸ್ಟವ್‌ಗಳು ಬಿಕರಿಯಾಗಿದ್ದಾಗಿ ಚೆನ್ನೈನ ಅಂಗಡಿಯೊಂದರ ಮಾಲೀಕರು ತಿಳಿಸಿದ್ದಾರೆ. ಕೇವಲ 30 ನಿಮಿಷದಲ್ಲಿ 10 ಒಲೆಗಳನ್ನು ಮಾರಿದ್ದಾಗಿ ಮಾಲೀಕರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಲ್ಲಿ ಬೇಡಿಕೆ ಶೇ.80ರಷ್ಟು ಏರಿಕೆ:ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ವಿದ್ಯುತ್ ಒಲೆಗಳು ಮತ್ತು ಇನ್ಫ್ರಾರೆಡ್ ಸ್ಟವ್‌ಗಳ ಮಾರಾಟ ಶೇ.75ರಿಂದ 80ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
==
ದೇಶದಲ್ಲಿ ಮುಗಿಯದ ಎಲ್‌ಪಿಜಿ ಬಿಕ್ಕಟ್ಟು- ಎಲ್‌ಪಿಜಿ ಖರೀದಿಗೆ ಏಜೆನ್ಸಿಗಳ ಮುಂದೆ ಜನರ ಸಾಲು
- ದೆಹಲಿಯಲ್ಲಿ ಇಂಡಕ್ಷನ್‌ಗಳ ಮಾರಾಟದಲ್ಲಿ ಶೇ.80ರಷ್ಟು ಏರಿಕೆ
- ಪ. ಬಂಗಾಳದಲ್ಲಿ ಮಕ್ಕಳ ಬಿಸಿಯೂಟಕ್ಕೂ ಕಂಟಕ- ತಿರುಪತಿ ದೇಗುಲಕ್ಕೆ ತಾಗದ ಸಿಲಿಂಡರ್ ಬಿಸಿ
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ಶುರುವಾಗಿರುವ ವಾಣಿಜ್ಯ ಸಿಲಿಂಡರ್ ಅಭಾವ ಗುರುವಾರವೂ ಮುಂದುವರೆದಿದೆ. ಹಲವು ರಾಜ್ಯಗಳಲ್ಲಿ ಜನರು ಎಲ್‌ಪಿಜಿ ಖರೀದಿಗೆ ಏಜೆನ್ಸಿಗಳ ಮುಂದೆ ಮುಗಿಬಿದ್ದರೆ, ಕೆಲವೆಡೆ ಮಕ್ಕಳ ಬಿಸಿಯೂಟಕ್ಕೆ ಕಂಟಕ ಎದುರಾಗಿದೆ. ಮದುವೆ ಸೇರಿ ವಿವಿಧ ಸಮಾರಂಭಗಳಿಗೆ ಕೇಟರಿಂಗ್ ಮಾಡುವವರು ಶೇ.20ರಷ್ಟು ದರ ಹೆಚ್ಚಿಸುವಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.
ಬಂಗಾಳದಲ್ಲಿ ಬಿಸಿಯೂಟಕ್ಕೂ ಕಂಟಕ:ಎಲ್‌ಪಿಜಿ ಕೊರತೆಯಿಂದ ಪ/ ಬಂಗಾಳದಲ್ಲಿ ಶಾಲಾ ಮಕ್ಕಳ ಬಿಸಿಯೂಟದ ಮೇಲೆಯೂ ಪರಿಣಾಮ ಬೀರಿದೆ. ಅಧಿಕಾರಿಗಳು ಕಟ್ಟಿಗೆಗಳಿಂದ ಅಡುಗೆ ಸಿದ್ಧಪಡಿಸುವಂತೆ ಶಾಲೆಗಳಿಗೆ ಸೂಚಿಸಿದ್ದಾರೆ. ಇಲ್ಲಿನ ಶಾಲೆಯೊಂದರಲ್ಲಿ ಸಿಲಿಂಡರ್ ಇಲ್ಲದೆ 1500 ಮಕ್ಕಳಿಗೆ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿದ ಪ್ರಸಂಗವೂ ನಡೆಯಿತು.ಮತ್ತೊಂದೆಡೆ ರಾಜಧಾನಿ ಕೋಲ್ಕತಾ ಸೇರಿದಂತೆ ಹಲವು ಕಡೆಗಳಲ್ಲಿ ಏಜೆನ್ಸಿಗಳ ಮುಂದೆ ಕಿ.ಮೀಗಟ್ಟಲೇ ಜನ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಆಟೋ ಚಾಲಕರು ಬುಧವಾರ ರಾತ್ರಿಯಿಂದಲೇ ಸಿಲಿಂಡರ್ ತುಂಬಿಸಲು ಕಾಯುತ್ತಿದ್ದರೂ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಅಲ್ಲದೇ ಆಟೋ ಎಲ್‌ಪಿಜಿ ದರ ಕೇಜಿಗೆ 5 ರು. ಹೆಚ್ಚಿಸಿರುವ ಆರೋಪ ಮಾಡಿದ್ದಾರೆ.
ಬಿಹಾರ, ಯುಪಿಯಲ್ಲಿ ಜನರ ಕ್ಯೂ:ಬಿಹಾರದಲ್ಲಿಯೂ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಉತ್ತರಪ್ರದೇಶದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಿಲಿಂಡರ್ ಕೊರತೆ, ದರ ಹೆಚ್ಚಳ ವದಂತಿಯಿಂದ ಸ್ಥಳೀಯರು ಮುಂಜಾನೆ 4 ಗಂಟೆಯಿಂದಲೇ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.ದಿಲ್ಲಿಯಲ್ಲಿ ಇಂಡಕ್ಷನ್ ಸ್ಟವ್‌ಗಳ ಬೇಡಿಕೆ ಶೇ.80ರಷ್ಟು ಏರಿಕೆ:ದೆಹಲಿಯಲ್ಲಿ ಎಲ್‌ಪಿಜಿ ಲಭ್ಯತೆ ಕಳವಳದಿಂದಾಗಿ ಜನರು ಪರ್ಯಾಯ ಆಯ್ಕೆಯ ಮೊರೆ ಹೋಗುತ್ತಿದ್ದಾರೆ. ಪರಿಣಾಮ ರಾಜಧಾನಿಯಕಲ್ಲಿ ಕಳೆದ ಎರಡು ದಿನಗಳಲ್ಲಿ ವಿದ್ಯುತ್ ಕುಕ್‌ಟಾಪ್‌ಗಳು, ಇಂಡಕ್ಷನ್‌ಗಳು ಮತ್ತು ಇನ್ಫ್ರಾರೆಡ್ ಸ್ಟೌವ್‌ಗಳ ಮಾರಾಟ ಶೇ.75ರಿಂದ 80ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಇಲ್ಲಿಯೂ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದಾರೆ ಇನ್ನು ಕೆಲವರು ಸೌದೆ ಒಲೆ ಸೇರಿ ಇತರ ಪರ್ಯಾಯ ಆಯ್ಕೆಯ ಮೊರೆ ಹೋಗಿದ್ದಾರೆ.
ತಿರುಪತಿ ದೇಗುಲದಲ್ಲಿ ಸಮಸ್ಯೆಯಿಲ್ಲ:ಸಿಲಿಂಡರ್ ಕೊರತೆ ದೇಶದ ಕೆಲವು ದೇವಸ್ಥಾನಗಳ ಮೇಲೆಯೂ ಪರಿಣಾಮ ಬೀರಿದೆ. ಆದರೆ ಪವಿತ್ರ ತಿರುಮಲ ತಿರುಪತಿ ದೇಗುಲದಲ್ಲಿ ಲಡ್ಡುಪ್ರಸಾದ ಸೇರಿದಂತೆ ಪ್ರಸಾದ ಸಿದ್ಧಪಡಿಸಲು ಯಾವುದೇ ಸಮಸ್ಯೆ ಸೃಷ್ಟಿಯಾಗಿಲ್ಲ. ಏಕೆಂದರೆ 1 ವಾರಕ್ಕೆ ಆಗುವಷ್ಟು ಎಲ್‌ಪಿಜಿ ದಾಸ್ತಾನು ಯಾವಾಗಲೂ ಇರುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಟಿಟಿಡಿ ಸ್ಪಷ್ಟಪಡಿಸಿದೆ.‘ಇಲ್ಲಿ ನಿತ್ಯ ಅಂದಾಜು 4 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಮಾತ್ರವಲ್ಲದೇ ದಿನಲೂ 10 ಟನ್‌ಗಳಿಗಿಂತ ಅಧಿಕ ಆಹಾರದ ಅವಶ್ಯಕತೆಯಿರುತ್ತದೆ. ಎಂದಿನಂತೆ ಪ್ರಸಾದ ಸಿದ್ಧಪಡಿಸಲಾಗುತ್ತಿದೆ’ ಎಂದಿದೆ.
==