ಡಿಸಿಎಂ ಅಜಿತ್ ಪವಾರ್ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್) ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ.
41 ಎನ್‌ಸಿಪಿ ಶಾಸಕರಿಗೆ ಅನಾಥ ಭಾವ
ಶರದ್ ಬಣಕ್ಕೆ ಮರಳುವ ಬಗ್ಗೆ ಚಿಂತನೆಶಿವಸೇನೆ/ಬಿಜೆಪಿ ಜೊತೆ ಸೇರ್ತಾರಾ?
ಪತ್ನಿ ಸುನೇತ್ರಾಗಿನ್ನು ಪಕ್ಷದ ಚುಕ್ಕಾಣಿ?ಮುಂಬೈ: ಡಿಸಿಎಂ ಅಜಿತ್ ಪವಾರ್ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್) ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ. ಅಜಿತ್‌ರ ಎನ್‌ಸಿಪಿ ಪಕ್ಷದಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಸಮರ್ಥ ನಾಯಕರಿಲ್ಲ. ಹೀಗಿರುವಾಗ, ಆ ಪಕ್ಷದ ಭವಿಷ್ಯ ಮತ್ತು 41 ಶಾಸಕರ ಮುಂದಿನ ನಡೆಯ ಬಗ್ಗೆ ಕೆಲ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಉತ್ತರಾಧಿಕಾರತ್ವದ ಕಿತ್ತಾಟ ಹಾಗೂ ಸೈದ್ಧಾಂತಿಕ ಕಾರಣಗಳಿಂದಾಗಿ 2023ರಲ್ಲಿ ಅಜಿತ್ ಅವರು ಶರದ್ ಪವಾರ್‌ರ ಎನ್‌ಸಿಪಿಯಿಂದ ಬೇರ್ಪಟ್ಟು ತಮ್ಮದೇ ಬಣ ಕಟ್ಟಿಕೊಂಡಿದ್ದರು. ಈಗ ನಾಯಕತ್ವದ ಕೊರತೆಯಿಂದಾಗಿ ಅವು ಮತ್ತೆ ವಿಲೀನವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಅಜಿತ್-ಶರದ್ ನಡುವಿನ ಮನಸ್ಥಾಪ ತಗ್ಗಿ ಇಬ್ಬರೂ ಕೈಜೋಡಿಸಲು ಮುಂದಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.
ಹೀಗಿರುವಾಗ, ಸಿಎಂ ದೇವೆಂದ್ರ ಫಡ್ನವೀಸ್ ಅವರು ಆ ಶಾಸಕರನ್ನು ತಮ್ಮ ಕೂಟದಲ್ಲೇ ಉಳಿಸಿಕೊಳ್ಳಲು ಖಂಡಿತ ಯತ್ನಿಸುತ್ತಾರೆ. ಇದು ಯಶಸ್ವಿಯಾದಲ್ಲಿ ಎನ್‌ಸಿಪಿ (ಅಜಿತ್) ಶಾಸಕರು ಬಿಜೆಪಿ ಅಥವಾ ಶಿಂಧೆಯವರ ಶಿವಸೇನೆ ಸೇರಬಹುದು. ಅತ್ತ ರಾಜ್ಯಸಭೆ ಸದಸ್ಯೆಯಾಗಿರುವ ಅಜಿತ್‌ರ ಪತ್ನಿ ಸುನೇತ್ರಾ ಅವರು ಎನ್‌ಸಿಪಿಯನ್ನು ಉಳಿಸಿಕೊಳ್ಳಲು ಅದರ ಚುಕ್ಕಾಣಿ ಹಿಡಿಯಬಹುದು. ಅವರಿಗೆ, ರಾಜಕೀಯದಲ್ಲಿ ಪಳಗಿರುವ, ಅಜಿತ್‌ರ ಆಪ್ತರೂ ಆಗಿದ್ದ ಸಂಸದ ಸುನೀಲ್ ತತ್ಕರೆ ಸಾಥ್ ನೀಡಬಹುದು.