ವಿದ್ಯಾರ್ಥಿಗೆ ತಾನು ತೇರ್ಗಡೆಯಾಗುತ್ತೇನೆಂಬ ವಿಶ್ವಾಸವಿದ್ದರೆ ಆತನಿಗೆ ಪರೀಕ್ಷಾ ಭಯವೇ ಇರುವುದಿಲ್ಲ. ಇದಕ್ಕೆ ವಿದ್ಯಾರ್ಥಿ ತನ್ನನ್ನು ತಾನೂ ಸಿದ್ಧಪಡಿಸಿಕೊಳ್ಳಬೇಕು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಓದುವ ಬದಲು, ಶಾಲಾ ಆರಂಭದ ದಿನಗಳಿಂದಲೇ ಓದಲು ಪ್ರಾರಂಭಿಸಿದರೆ ಭಯ ಎಂಬುದು ಇರುವುದೇ ಇಲ್ಲ.
ಧಾರವಾಡ:
ಸಕಾರಾತ್ಮಕ ಯೋಚನೆ, ನಿಗದಿತ ಅಧ್ಯಯನದ ವೇಳಾ ಪಟ್ಟಿ, ಪೋಷಕಾಂಶದ ಆಹಾರ, ನಿಯಮಿತ ವ್ಯಾಯಾಮ, ಧ್ಯಾನ ಮಾಡಿದರೆ ಪರೀಕ್ಷಾ ಭಯವಿಲ್ಲದೆ ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸುತ್ತೀರಿ ಎಂದು ಜೆಎಸ್‌ಎಸ್‌ನ ಕಾರ್ಯದರ್ಶಿ ಅಜಿತ ಪ್ರಸಾದ ಕಿವಿಮಾತು ಹೇಳಿದರು.ಇಲ್ಲಿನ ಜೆಎಸ್‌ಎಸ್ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿವಿಧ ಶಾಲೆಗಳಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದ್ದ ಕಾರ್ಯಾಗಾರದಲ್ಲಿ ಸರಳ ಹಾಗೂ ಸಂಕ್ಷಿಪ್ತವಾಗಿ ಮಕ್ಕಳಿಗೆ ಮನದಟ್ಟಾಗುವಂತೆ ಪರೀಕ್ಷಾ ಭಯ ಹೋಗಲಾಡಿಸುವ ಬಗ್ಗೆ ನುಡಿದು ಮಕ್ಕಳನ್ನು ಹುರಿದುಂಬಿಸಿದರು.ವಿದ್ಯಾರ್ಥಿಗೆ ತಾನು ತೇರ್ಗಡೆಯಾಗುತ್ತೇನೆಂಬ ವಿಶ್ವಾಸವಿದ್ದರೆ ಆತನಿಗೆ ಪರೀಕ್ಷಾ ಭಯವೇ ಇರುವುದಿಲ್ಲ. ಇದಕ್ಕೆ ವಿದ್ಯಾರ್ಥಿ ತನ್ನನ್ನು ತಾನೂ ಸಿದ್ಧಪಡಿಸಿಕೊಳ್ಳಬೇಕು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಓದುವ ಬದಲು, ಶಾಲಾ ಆರಂಭದ ದಿನಗಳಿಂದಲೇ ಓದಲು ಪ್ರಾರಂಭಿಸಿದರೆ ಭಯ ಎಂಬುದು ಇರುವುದೇ ಇಲ್ಲ ಎಂದ ಅವರು, ಪರೀಕ್ಷೆಗೆ ಎರಡು ತಿಂಗಳು ಉಳಿದಿದ್ದು ಇಂದಿನಿಂದಲೇ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಪರೀಕ್ಷೆಗೆ ಸಿದ್ಧರಾಗಬೇಕು ಎಂದರು.
ವಿಷಯವಾರು ನೋಟ್ಸ್, ಸೂತ್ರ, ನಿಗದಿತ ಸಮಯಕ್ಕೆ ಸರಿಯಾಗಿ ಅಧ್ಯಯನ, ಆಗಾಗ ವಿರಾಮ, ಪುನರ್ ಮನನ ಮಾಡಬೇಕು. ಹಳೆ ಪ್ರಶ್ನೆ ಪತ್ರಿಕೆ ಬಿಡಿಸುವ ಮೂಲಕ ಸಮಯ ನಿರ್ವಹಣೆ ಬಗ್ಗೆ ಅರಿತುಕೊಳ್ಳಬೇಕು ಎಂದ ಅಜಿತ ಪ್ರಸಾದ್, ಬರೀ ಅಧ್ಯಯನಕ್ಕಷ್ಟೇ ಒತ್ತು ನೀಡದೇ, ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪೋಷಕಾಂಶಯುಕ್ತ ಆಹಾರ, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಧ್ಯಾನ, ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಸ್.ಎಸ್. ಕೆಳದಿಮಠ, ಶಿಸ್ತು, ಬದ್ಧತೆ, ಜವಾಬ್ದಾರಿ ಅರಿತು ಅಧ್ಯಯನ ಮಾಡಬೇಕು. ಜೀವನದ ಮೊದಲ ಘಟ್ಟ ಎಸ್ಸೆಸ್ಸೆಲ್ಸಿ ಆಗಿದ್ದು ಸಮಯ ಪ್ರಜ್ಞೆ ಬೆಳೆಸಿಕೊಂಡು ಪರೀಕ್ಷೆ ಎದುರಿಸಬೇಕು ಎಂದರು.
ಧಾರವಾಡ ಬಿಇಒ ರಾಮಕೃಷ್ಣ ಸದಲಗಿ ಮಾತನಾಡಿ, ವಿಷಯದ ಪರಿಪೂರ್ಣ ಅರಿವಿದ್ದಾಗ ಜ್ಞಾನ ಹೆಚ್ಚಳವಾಗುತ್ತದೆ. ಇದರಿಂದ ಪರೀಕ್ಷಾ ಭಯವೇ ನಿಮತ್ತ ಸುಳಿಯುವುದಿಲ್ಲ ಎಂದು ಹೇಳಿದರು.ಪರೀಕ್ಷೆ ಸರಳವಾಗಿದ್ದು ಇಷ್ಟೇ ಪ್ರಶ್ನೆಗಳು ಬರುತ್ತವೆಂದು ಶಿಕ್ಷಕರು ಹೇಳುತ್ತಾರೆ. ಅಷ್ಟು ಓದಿದರೆ ನೀವು ಉತ್ತೀರ್ಣರಾಗುತ್ತೀರಿ ಎಂದ ಅವರು, ಮಿಷನ್ ಪರೀಕ್ಷಾ ಪ್ರ್ಯಾಕ್ಟಿಸ್ ಸೇರಿದಂತೆ ಫಲಿತಾಂಶ ಸುಧಾರಿಸಲು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕನ್ನಡಪ್ರಭ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಎಸ್ಸೆಸ್ಸೆಲ್ಸಿ ಫಲಿತಾಂಶದ ವೇಳೆ ಎಲ್ಲ ಮಾಧ್ಯಮಗಳಲ್ಲಿ ರಾಜ್ಯಕ್ಕೆ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಹೆಸರು, ಜಿಲ್ಲೆಗಳ ಸ್ಥಾನಮಾನ, ಸಾಧಿಸಿದ ಶಾಲೆಗಳ ಕುರಿತು ಫೋಟೋ ಸಮೇತ ಮುಖಪುಟದಲ್ಲಿ ಸುದ್ದಿ ಪ್ರಕಟವಾಗುತ್ತವೆ. ಫಲಿತಾಂಶದ ಕುಸಿತಕ್ಕೆ ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕರು ಕಾರಣವೆಂದು ಆರೋಪಿಸುವುದು ಸಹಜ ಹಾಗೂ ಸರಳ. ಆದರೆ, ಸುಧಾರಣೆ ತರುವ ಹೊಣೆಗಾರಿಕೆ ಬರೀ ಶಿಕ್ಷಣ ಇಲಾಖೆ ಮೇಲಷ್ಟೇ ಅಲ್ಲದೆ ಮಾಧ್ಯಮಗಳ ಮೇಲೂ ಇದೆ. ಹೀಗಾಗಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಮತ್ತು ಶಿಸ್ತು ಓದು ರೂಢಿಸಿಕೊಳ್ಳಲು ಕಾರ್ಯಾಗಾರ ಆಯೋಜಿಸುತ್ತಿದೆ ಎಂದರು.ಆತ್ಮಸ್ಥೈರ್ಯದಿಂದ ಅಧ್ಯಯನ ಮಾಡಿ ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿದರೆ ಉತ್ತಮ ಅಂಕಗಳು ತಾನಾಗಿಯೇ ಬರುತ್ತವೆ. ಈ ಮೂಲಕ ಶಿಕ್ಷಕರು, ಪಾಲಕರಿಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅತಿಥಿಗಳಾಗಿ ಆರ್‌ಟಿಒ ಶ್ರೀಧರ ಮಲ್ನಾಡದ, ಜೆಎಸ್‌ಎಸ್ ಐಟಿಐ ಕಾಲೇಜ್ ಪ್ರಾಂಶುಪಾಲ ಮಹಾವೀರ ಉಪಾದ್ಯಾಯ, ಕ್ಷೇತ್ರ ಸಮನ್ವಯಾಧಿಕಾರಿ ಗುಜ್ಜರ್ ಸೇರಿದಂತೆ ಹಲವರಿದ್ದರು.