- ವಾಯು, ಜಲಮಾರ್ಗದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಈ ನಡೆ?
- ಇದರ ಭಾಗವಾಗಿ ಮಧ್ಯಪ್ರಾಚ್ಯದತ್ತ ಅಮೆರಿಕದ 2,500 ಯುದ್ಧನೌಕೆ- ಆದರೆ ಇರಾನ್ ಮುಖ್ಯ ಭಾಗದ ಬದಲು ಖಾರ್ಗ್‌ನಂಥ ದ್ವೀಪಕ್ಕೆ ದಾಳಿ?ವಾಷಿಂಗ್ಟನ್/ ಟೆಹ್ರಾನ್: ಇರಾನ್ ಮೇಲೆ ಈಗ ವಾಯುದಾಳಿ ನಡೆಸುತ್ತಿರುವ ಅಮೆರಿಕ, ಮುಂದೆ ಭೂದಾಳಿ ಕೂಡ ನಡೆಸುವ ಸಾಧ್ಯತೆ ಇದೆ ಎಂದು ಕೆಲವು ಯುದ್ಧ ತಜ್ಞರು ಹೇಳಿದ್ದಾರೆ. ಆದರೆ ಈ ದಾಳಿ ದುರ್ಗಮ ಬೆಟ್ಟಗುಡ್ಡಗಳು ಇರುವ ಕಾರಣ ಇಡೀ ದೇಶದಲ್ಲಿ ನಡೆಯಲ್ಲ. ಬದಲಾಗಿ, ಇರಾನ್ ಸನಿಹ ಇರುವ ತೈಲ ಸಂಪದ್ಭರಿತ ಖಾರ್ಗ್ ದ್ವೀಪದ ಮೇಲೆ ನಡೆಯಬಹುದು. ಇದರ ಪೂರ್ವಭಾವಿಯಾಗಿ ಶನಿವಾ ಅಮೆರಿಕ, ಖಾರ್ಗ್ ದ್ವೀಪದ ಮೇಲೆ ವಾಯುದಾಳಿ ಮಾಡಿದೆ ಎಂದು ಗೊತ್ತಾಗಿದೆ.ಇದಕ್ಕೆ ಪೂರಕವಾಗಿ 2,500 ಹೆಚ್ಚುವರಿ ಮರೀನ್‌ಗಳು ಮತ್ತು ‘ಯುಎಸ್‌ಎಸ್ ಟ್ರೈಪೋಲಿ’ ಸೇರಿದಂತೆ ಭೂದಾಳಿ ಹಾಗೂ ಜಲದಾಳಿ ಎರಡಕ್ಕೂ ನೆರವಾಗಬಲ್ಲ ಹಡಗುಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದರೆ ವಾಯು ಹಾಗೂ ಜಲಮಾರ್ಘದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಭೂದಾಳಿ ನಡೆಸುವ ಯೋಚನೆ ಅಮೆರಿಕದ್ದು ಎನ್ನಲಾಗಿದೆ.ಇರಾನ್ ಮುಖ್ಯ ಭೂಮಿ ದುರ್ಗಮ ಪ್ರದೇಶವಾಗಿದೆ. ಮೇಲಾಗಿ ಅಮೆರಿಕ ಸ್ವಾಧೀನದಲ್ಲಿದ್ದ ಇರಾಕ್‌ಗಿಂತ 4 ಪಟ್ಟು ದೊಡ್ಡದು. ಅಲ್ಲದೆ, ಇರಾನ್ ಇಡೀ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಸೈನಿಕರನ್ನು ಹೊಂದಿದೆ. ಒಂದು ಕಡೆ ದಾಳಿ ನಡೆಸಿದರೆ ಇನ್ನೊಂದು ಕಡೆಯಿಂದ ಅವರು ಪ್ರತಿದಾಳಿ ಮಾಡುತ್ತಾರೆ. ಹೀಗಾಗಿ ಅಲ್ಲಿ ಭೂದಾಳಿ ನಡೆಸುವುದು ಕಷ್ಟ. ಆದ್ದರಿಂದ ಇರಾನ್ ಸ್ವಾಧೀನದಲ್ಲಿರುವ ಖಾರ್ಗ್‌ನಂಥ ಚಿಕ್ಕಪುಟ್ಟ ದ್ವೀಪಗಳಲ್ಲಿ ತನ್ನ ಸೈನಿಕರನ್ನು ನುಗ್ಗಿಸಿ ಭೂದಾಳಿ ಮಾಡುವ ಯೋಚನೆ ಅಮೆರಿಕಕ್ಕಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.==
ಕೊನೆಯವರೆಗೆ ಹೋರಾಟ, ಶರಣಾಗತಿ ಅಸಾಧ್ಯ: ಇರಾನ್-ಇರಾನ್ ಶರಣಾಗುತ್ತೆ ಎಂದ ಟ್ರಂಪ್‌ಗೆ ತಿರುಗೇಟು
-ದೇಶಕ್ಕಾಗಿ ರಕ್ತ ಚೆಲ್ಲಲು ಸಿದ್ಧ: ಇರಾನ್ ಪ್ರತಿನಿಧಿ
ಟೆಹ್ರಾನ್: ‘ಇರಾನ್‌ನಲ್ಲಿ ನಾಯಕತ್ವವೇ ಉಳಿದಿಲ್ಲ. ಅದು ಯಾವುದೇ ಕ್ಷಣದಲ್ಲಿ ಶರಣಾಗಬಹುದು’ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಶನಿವಾರ ಇರಾನ್ ಖಡಕ್ ತಿರುಗೇಟು ನೀಡಿದ್ದು, ‘ಯುದ್ಧದ ಅಂತ್ಯದ ವರೆಗೂ ಹೋರಾಡುತ್ತೇವೆ. ದೇಶಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ಸಿದ್ಧ. ಎಂದೆಂದಿಗೂ ಶತ್ರುವಿಗೆ ಶರಣಾಗೆವು’ ಎಂದು ಪ್ರತಿ ಸವಾಲು ಎಸೆದಿದೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಭಾರತದಲ್ಲಿ ಇರಾನ್ ಸರ್ವೋಚ್ಚ ನಾಯಕನ ಪ್ರತಿನಿಧಿ ಡಾ. ಅಬ್ದುಲ್ ಮಜಿದ್ ಇಲಾಹಿ, ‘ಅವರು ಈ ಯುದ್ಧವನ್ನು ನಮ್ಮ ಮೇಲೆ ಹೇರಿದರು. ನಾವು ನಮ್ಮನ್ನು ರಕ್ಷಿಸಿಕೊಳ್ಳಲೇಬೇಕು. ನಮ್ಮ ಘನತೆ, ಸ್ವಾತಂತ್ರ್ಯ ಮತ್ತು ದೇಶಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ಸಿದ್ಧರಿದ್ದೇವೆ. ಶತ್ರುಗಳಿಗೆ ಮಣಿಯುವುದಿಲ್ಲ ಮತ್ತು ಈ ಯುದ್ಧದ ಕೊನೆಯವರೆಗೂ ದೃಢವಾಗಿ ನಿಲ್ಲುತ್ತೇವೆ. ಜಾಗತಿಕ ನಾಯಕರು ಈ ಸಂಘರ್ಷವನ್ನು ಕೊನೆಗೊಳಿಸಲು ಬಯಸಿದರೆ, ಅವರು ಒಕ್ಕೊರಲಿನಿಂದ ಅದನ್ನು ನಿಲ್ಲಿಸಲು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.