ಉದ್ಯೋಗ ಖಾತ್ರಿ ಯೋಜನೆ ಕೇವಲ ನಾಮ್‌ಕೆವಾಸ್ತೆಯಾಗದೆ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು, ಪ.ಜಾತಿ ಪಂಗಡದ ಪ್ರತಿಯೊಬ್ಬರಿಗೂ ಲಾಭ ದೊರೆಕಿಸಿಕೊಡುವ ದಿಸೆಯಲ್ಲಿ ಸಂಪೂರ್ಣ ಬದಲಾವಣೆ ಮೂಲಕ ವಿಬಿಜಿ ರಾಮ್ ಜಿ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದ ಹೊಸ ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳು ಮಾಹಿತಿ ಮೂಲಕ ಜನಸಾಮಾನ್ಯರನ್ನು ಎತ್ತಿಕಟ್ಟಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಉದ್ಯೋಗ ಖಾತ್ರಿ ಯೋಜನೆ ಕೇವಲ ನಾಮ್‌ಕೆವಾಸ್ತೆಯಾಗದೆ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು, ಪ.ಜಾತಿ ಪಂಗಡದ ಪ್ರತಿಯೊಬ್ಬರಿಗೂ ಲಾಭ ದೊರೆಕಿಸಿಕೊಡುವ ದಿಸೆಯಲ್ಲಿ ಸಂಪೂರ್ಣ ಬದಲಾವಣೆ ಮೂಲಕ ವಿಬಿಜಿ ರಾಮ್ ಜಿ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದ ಹೊಸ ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳು ಮಾಹಿತಿ ಮೂಲಕ ಜನಸಾಮಾನ್ಯರನ್ನು ಎತ್ತಿಕಟ್ಟಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು.ಶನಿವಾರ ಪಟ್ಟಣದ ಮಾಳೇರಕೇರಿಯಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಗೆ ಅಮೂಲಾಗ್ರ ಬದಲಾವಣೆ ಮೂಲಕ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಲು ಪ್ರಧಾನಿ ಮೋದಿ ಅತ್ಯಂತ ಮಹಾತ್ವಾಕಾಂಕ್ಷೆಯ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.
ಪ್ರತಿಯೊಬ್ಬರಿಗೂ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗಕ್ಕಾಗಿ ವರ್ಷದಲ್ಲಿ ಕನಿಷ್ಠ 125 ದಿನ ಉದ್ಯೋಗ, ವೇತನ ರು.350ಕ್ಕೆ ಹೆಚ್ಚಳ ಸಹಿತ ಸಂಪೂರ್ಣ ಬದಲಾವಣೆ ಮೂಲಕ ಯೋಜನೆ ನಾಮಕೆವಾಸ್ತೆಯಾಗದ ರೀತಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ರೂಪಿಸಲಾಗಿದೆ ಎಂದ ಅವರು, ಯುಪಿಎ ಸರ್ಕಾರದಲ್ಲಿ ಕೇವಲ 14-15 ಸಾವಿರ ಕೋಟಿ ರು. ವ್ಯಯಿಸಲಾಗುತ್ತಿದ್ದ ಯೋಜನೆಗೆ ಮೋದಿ ಸರ್ಕಾರ 86.5 ಸಾವಿರ ಕೋಟಿ ರು.ಗೆ ಹೆಚ್ಚಳಗೊಳಿಸಿದ್ದು ಪ್ರಸಕ್ತ ವರ್ಷ 1 ಲಕ್ಷ ಕೋಟಿ ರು. ಮೀರಲಿದೆ ಎಂದರು. ರಾಜ್ಯದ ಆಸ್ತಿ ಹೆಚ್ಚಿಸುವ ಜತೆಗೆ ಗ್ರಾಮೀಣ ಜನತೆಗೆ ಸಂಪೂರ್ಣ ಪ್ರಯೋಜನ ದೊರೆಯುವ ಯೋಜನೆ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಪಕ್ಷ ಜನತೆಗೆ ಸುಳ್ಳು ಮಾಹಿತಿ, ನಿರಂತರ ಅಪಪ್ರಚಾರದ ಮೂಲಕ ವಿರೋಧಿಸಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿರುವುದು ದುರ್ದೈವದ ಸಂಗತಿ ಎಂದರು.ಕಾಂಗ್ರೆಸ್ ಪಕ್ಷ ಅಸಹಕಾರ ಚಳುವಳಿ ಮೂಲಕ ಪ್ರತಿಯೊಂದು ಜನಪರ ಯೋಜನೆಯನ್ನು ವಿರೋಧಿಸುತ್ತಿದೆ ಎಂದು ಟೀಕಿಸಿದ ಅವರು, ಕಸ್ತೂರಿ ರಂಗನ್ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಇಂದಿಗೂ ಅಸಾದ್ಯವಾಗಿದೆ. ವಿಬಿಜಿ ರಾಮ್ ಜಿ ಕಾಯ್ದೆ ಬಗ್ಗೆ ಕರೆದ ತುರ್ತು ಅಧಿವೇಶನದಲ್ಲಿ ರಾಜ್ಯಪಾಲರ ಮೂಲಕ ಸುಳ್ಳು ಬಾಷಣಕ್ಕೆ ಆಸ್ಪದ ನೀಡಲಿಲ್ಲ ಇದರಿಂದಾಗಿ ಕೆರಳಿದ ಕಾಂಗ್ರೆಸ್ ಸಂವಿಧಾನಕ್ಕೆ ಗೌರವ ನೀಡುವುದಾಗಿ ಪದೇ ಪದೇ ಉಚ್ಚರಿಸಿ ಸದನದಲ್ಲಿ ರಾಜ್ಯಪಾಲರ ಜತೆ ವರ್ತಿಸಿದ ರೀತಿ ಅತ್ಯಂತ ಹೇಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿಯಡಿ ಕೇವಲ ಗುಂಡಿ ತೆಗೆದು ಮುಚ್ಚುತ್ತಿದ್ದು, ಇದೀಗ ಗ್ರಾಮ ಸಭೆಯಲ್ಲಿನ ತೀರ್ಮಾನಕ್ಕೆ ಆದ್ಯತೆ ನೀಡಿ ಹೊಸ ಕಾಯ್ದೆ ರೂಪಿಸಿದ್ದು ತಪ್ಪಾ ಎಂದು ಪ್ರಶ್ನಿಸಿದರು. ಗ್ರಾಮೀಣ ಜನತೆಗೆ ಮನವರಿಕೆ ಮಾಡಲು ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಲಿದ್ದು, ಮನರೇಗಾ ಹೆಸರಿನಲ್ಲಿ ಲೂಟಿ ತಡೆಗಟ್ಟಿ ಹೊಸ ಕಾಯ್ದೆ ಸದ್ಬಳಕೆಗೆ ಸದನದ ಒಳಗೆ ತಕ್ಕ ಉತ್ತರ ನೀಡಲು ಸಿದ್ದರಾಗಿರುವುದಾಗಿ ತಿಳಿಸಿದರು.ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧೀಜಿ ಸಲಹೆ ಧಿಕ್ಕರಿಸಿ ಅಧಿಕಾರಕ್ಕಾಗಿ ಗಾಂಧೀಜಿ ಹೆಸರಿನಲ್ಲಿ ಕುಟುಂಬ ಶಾಶ್ವತ ಅಧಿಕಾರ ಅನುಭವಿಸಿದೆ. ಯೋಜನೆಯಿಂದ ಗಾಂಧೀಜಿ ಹೆಸರು ತೆಗದರೂ ಮೋದಿ ರಾಮ ರಾಜ್ಯದ ಕನಸು ನನಸಾಗಿಸಲು ಶ್ರಮಿಸುತ್ತಿದ್ದಾರೆ, ಈ ಹಿಂದೆ ಜವಾಹರ್ ಯೋಜನೆ ಹೆಸರು ತೆಗೆದು ಮನರೇಗಾ ಬದಲಾಯಿಸಿದ ಕಾಂಗ್ರೆಸ್ ಇದೀಗ ವಿರೋದಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ಗೋಷ್ಠಿಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಪ್ಪ, ಅಶೋಕ್ ಮಾರವಳ್ಳಿ, ಹುಲ್ಮಾರ್ ಮಹೇಶ್, ಗಿರೀಶ್ ಧಾರವಾಡದ, ಚನ್ನವೀರಪ್ಪ, ಗುರುರಾಜ ಜಗತಾಪ್, ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.