ಬಿಹಾರ ಮೊದಲ ಹಂತದ ಮತದಾನ ದಾಖಲೆ ಶೇ.64.66 ಮತದಾನ

Published : Nov 07, 2025, 05:55 AM IST
bihar election voting

ಸಾರಾಂಶ

ಬಿಜೆಪಿ ಹಾಗೂ ಆರ್‌ಜೆಡಿ ಮೈತ್ರಿಕೂಟಗಳ ನಡುವೆ ತೀವ್ರ ವಾಗ್ದಾಳಿಗಳಿಗೆ ವೇದಿಕೆಯಾಗಿದ್ದ ಬಿಹಾರದಲ್ಲಿ ಗುರುವಾರ 1314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮೊದಲ ಹಂತದ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಜತೆಗೆ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆದಿದೆ.

ಪಟನಾ: ಬಿಜೆಪಿ ಹಾಗೂ ಆರ್‌ಜೆಡಿ ಮೈತ್ರಿಕೂಟಗಳ ನಡುವೆ ತೀವ್ರ ವಾಗ್ದಾಳಿಗಳಿಗೆ ವೇದಿಕೆಯಾಗಿದ್ದ ಬಿಹಾರದಲ್ಲಿ ಗುರುವಾರ 1314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮೊದಲ ಹಂತದ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಜತೆಗೆ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆದಿದೆ.

ಈ ಬಗ್ಗೆ ಚುನಾವಣಾ ಆಯೋಗ ಹೇಳಿಕೆ ಬಿಡುಗಡೆ ಮಾಡಿದ್ದು, ‘121 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. 45,341 ಬೂತ್‌ಗಳಲ್ಲಿ 3.75 ಕೋಟಿ ಮತದಾರರು ಮತ ಚಲಾಯಿಸಿದರು. ಮೊದಲ ಹಂತದಲ್ಲಿ ಶೇ.64.66ರಷ್ಟು ಮತದಾನ ನಡೆದಿದ್ದು, ಬಿಹಾರದ ಇತಿಹಾಸದಲ್ಲಿ ಇಷ್ಟು ಪ್ರಮಾಣದಲ್ಲಿ ಜನ ಮತ ಚಲಾಯಿಸಿದ್ದು ಇದೇ ಮೊದಲು’ ಎಂದಿದೆ. ಈ ಮೊದಲು 2000ದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ.62.57ರಷ್ಟು ಮತದಾನವಾಗಿತ್ತು.

ಮತದಾನ ಪ್ರಕ್ರಿಯೆ ಶಾಂತಿಯುತ

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದರೂ, ಉಪಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಅವರ ಬೆಂಗಾವಲು ವಾಹನದ ಮೇಲೆ ಲಖೀಸರಾಯ್‌ನಲ್ಲಿ ದಾಳಿಯಾದ ಘಟನೆಯೂ ನಡೆಯಿತು. ಇದರಿಂದ ಕೊಂಚ ಮಟ್ಟಿಗೆ ಶಾಂತಿ ಭಂಗವಾಯಿತು. ಇದನ್ನು ಹೊರತುಪಡಿಸಿ, ಮತಗಟ್ಟೆಗಳಲ್ಲಿ ಯಾವುದೇ ದುರ್ಘಟನೆ, ದುಷ್ಕೃತ್ಯಗಳು ಸಂಭವಿಸಿದ್ದು ವರದಿಯಾಗಿಲ್ಲ.

ಕಣದಲ್ಲಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ, ಆರ್‌ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್‌, ಲಾಲು ಹಿರಿಯ ಮಗ, ಜನಶಕ್ತಿ ಜನತಾ ದಳದ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಇದ್ದರು.

ಭರ್ಜರಿ ಪ್ರಚಾರ ನಡೆಸಿದ್ದರು

ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರಂತಹ ರಾಷ್ಟ್ರಮಟ್ಟದ ನಾಯಕರಿಂದ ಹಿಡಿದು, ಆರ್‌ಜೆಡಿಯ ಲಾಲು ಪ್ರಸಾದ್‌ ಯಾದವ್‌, ಪುತ್ರ ತೇಜಸ್ವಿ, ಡಿಸಿಎಂ ಸಾಮ್ರಾಟ್‌ ಚೌಧರಿಯವರಂತಹ ಪ್ರಭಾವಿ ನಾಯಕರು ತಮ್ಮ ಕೂಟಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಸುಶಾಸನ ಹಾಗೂ ಜಂಗಲ್‌ ರಾಜ್ಯದಂತಹ ವಾಗ್ದಾಳಿಗಳಿಂದ ಹಿಡಿದು ಎರಡೂ ಕೂಟಗಳ ಭರ್ಜರಿ ಉಚಿತಗಳು ಮತ್ತು ಭರವಸೆಗಳು ಇಡೀ ದೇಶದ ಗಮನವನ್ನು ಈ ಚುನಾವಣೆಯತ್ತ ಸೆಳೆದಿದ್ದವು. ಒಂದು ಕಡೆ ಎನ್‌ಡಿಎ ಕೂಟವು ಸತತ 20 ವರ್ಷಗಳ ಆಡಳಿತವನ್ನು ಮುಂದುವರೆಸುವ ಹಂಬಲದಲ್ಲಿದ್ದರೆ, ಅತ್ತ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷವನ್ನೊಳಗೊಂಡ ತೇಜಸ್ವಿ ಯಾದವ್‌ ನೇತೃತ್ವದ ಕೂಟ 2 ದಶಕದ ಬಳಿಕ ಮತ್ತೆ ಗದ್ದುಗೆಗೇರುವ ಹುಮ್ಮಸ್ಸಿನಲ್ಲಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಪರವಾಗಿ ಫಲಿತಾಂಶ ಬರುವ ಭವಿಷ್ಯ ನುಡಿದಿದ್ದವು. 2ನೇ ಹಂತದ ಮತದಾನವು ನ.11ರಂದು ನಡೆಯಲಿದ್ದು, ನ.14ರಂದು ಫಲಿತಾಂಶ ಘೋಷಣೆಯಾಗಲಿದೆ.

PREV
Read more Articles on

Recommended Stories

ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಭಾರತದ ಅಗರಬತ್ತಿಗಿನ್ನು ಬಿಐಎಸ್‌ ಪ್ರಮಾಣ : ಶೋಭಾ ಕರಂದ್ಲಾಜೆ