ಕನ್ನಡಪ್ರಭ ವಾರ್ತೆ ವಿಧಾನಸಭೆರಾಜ್ಯದ ನೀರಾವರಿ ಯೋಜನೆಗಳಲ್ಲಿ ರೈತರು ಅಕ್ರಮವಾಗಿ ಕೆನಾಲ್‌ಗಳಿಗೆ ಪಂಪ್‌ಸೆಟ್ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಯೋಜನೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಇದೇ ಅಧಿವೇಶನದಲ್ಲೇ ವಾರದೊಳಗೆ ಅಗತ್ಯ ಮಸೂದೆ ಮಂಡಿಸಲಾಗುವುದು ಎಂದು ಬೃಹತ್ ನೀರಾವರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾವು ನೀರನ್ನು ಏತ ನೀರಾವರಿ ಮೂಲಕ 40 ಕಿ.ಮೀ.ವರೆಗೆ ನೀರು ಹರಿಸುತ್ತೇವೆ. ಆ ನೀರನ್ನೇ ಕೆಲವೆಡೆ 10 ಕಿಮೀಗಟ್ಟಲೇ ಪಂಪ್ ಮಾಡುತ್ತಿದ್ದಾರೆ. ಯೋಜನೆ ಮಾಡಿ ಏನು ಲಾಭ? ಕೆಆರ್‌ಎಸ್ ನೀರು ಮಳವಳ್ಳಿಗೆ ಹೋಗುವುದೇ ಇಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆ ನೀರನ್ನೇ ನೋಡಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದು ಎಂದರು. ಇದಕ್ಕೆ, ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್ ಸಹಮತ ವ್ಯಕ್ತಪಡಿಸಿ, ದಯವಿಟ್ಟು ಆದಷ್ಟು ಬೇಗ ವಿಧೇಯಕ ಸಿದ್ದಪಡಿಸಿ, ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.