‘ಕನ್ನಡ ಪ್ರಭ’ ವರದಿ ಪ್ರಸ್ತಾಪಿಸಿ ಗಮನ ಸೆಳೆದ ಅಶೋಕ್ ಕನ್ನಡಪ್ರಭ ವಾರ್ತೆ ವಿಧಾನಸಭೆ
ಮಂಗಳವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಅರಗ ಜ್ಞಾನೇಂದ್ರ, ಸಿದ್ದರಾಮಯ್ಯ ಅವರು ತಾಕತ್ತಿನ ಮುಖ್ಯಮಂತ್ರಿಯಾಗಿದ್ದರು. ಆದರೆ ಈಗ ಸಡಿಲವಾಗಿದ್ದಾರೆ. ಸರ್ಕಾರದ ನೇತೃತ್ವ ವಹಿಸಿದ ವ್ಯಕ್ತಿಯ ಬಗ್ಗೆ ಶ್ರದ್ಧೆ, ಭಯ ಇರಬೇಕು. ಅದು ಇಲ್ಲವಾಗಿದ್ದು, ಎಲ್ಲವೂ ಕಳೆದುಹೋಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂದು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.ಹಗರಣ ಸಂಬಂಧ ಬಂಧಿತ ಸತ್ಯನಾರಾಯಣ ವರ್ಮಾ ಮೊಬೈಲ್ ಲಭ್ಯವಾಗಿಲ್ಲ. ಒಂದು ವೇಳೆ ಅದು ಲಭ್ಯವಾದರೆ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಗಲಿದೆ. ಮೊಬೈಲ್‌ನಲ್ಲಿ ಹಲವರ ಹೆಸರು ಉಲ್ಲೇಖವಾಗಿದೆ ಎಂಬ ಮಾಹಿತಿ ಇದೆ. ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆಯಾಗಿದೆ ಎಂದು ಇ.ಡಿ. ಹೇಳಿದೆ ಎಂದು ತಿಳಿಸಿದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇ.ಡಿ. ಆ ರೀತಿ ಹೇಳಿದ್ದರೆ ದಾಖಲೆ ಕೊಡಿ. ಅವ್ಯವಹಾರ ನಡೆಸಿರುವುದು ಪಾಪದ ಕೆಲಸ. ಪಾಪದ ಮಾಡಿರುವವರನ್ನು ಬಲಿ ತೆಗೆಯುತ್ತೇವೆ. ಪ್ರಕರಣದ ದಾರಿ ತಪ್ಪಿಸಬೇಕಾದ ಅಗತ್ಯ ಇಲ್ಲ. ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದರು.ಈ ವೇಳೆ ಕೃಷ್ಣಬೈರೇಗೌಡ ಮಾತಿಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಕೃಷ್ಣಬೈರೇಗೌಡ ನಡುವಿನ ವಾಗ್ವಾದ ತೀವ್ರಗೊಂಡಾಗ ಸದನದಲ್ಲಿ ಗದ್ದಲ ಉಂಟಾಯಿತು. ‘ಕನ್ನಡಪ್ರಭ’ ವರದಿ ಪ್ರಸ್ತಾಪ: ಇಡಿ ವಿಚಾರ ಸಂಬಂಧ ಅರಗ ಜ್ಞಾನೇಂದ್ರ ಬೆಂಬಲಕ್ಕೆ ನಿಂತ ಪ್ರತಿಪಕ್ಷ ನಾಯಕ ಆರ್.ಅಶೋಕ್, ಲೋಕಸಭೆ ಚುನಾವಣೆಗೆ ಹಣ ಬಳಕೆಯಾಗಿರುವ ಬಗ್ಗೆ ‘ಕನ್ನಡಪ್ರಭ’ ವರದಿಯನ್ನು ಪ್ರಸ್ತಾಪಿಸಿದರು. ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಲೋಕಸಭಾ ಚುನಾವಣೆಗೆ ಹಣ ಬಳಕೆಯಾಗಿರುವ ಕುರಿತು ಮಾಧ್ಯಮದಲ್ಲಿಯೇ ಬಂದಿದೆ. ಅಲ್ಲದೇ, ಪ್ರಕರಣ ಸಂಬಂಧ ನಿಗಮ ಅಧಿಕಾರಿ ಚಂದ್ರಶೇಖರ್ ಅವರ ಸಾವಿನ ಪತ್ರ ಕೇವಲ ಡೆತ್‌ನೋಟ್ ಅಲ್ಲ, ಅದು 187 ಕೋಟಿ ರು. ಚೆಕ್ ಅದು ವಾಗ್ದಾಳಿ ನಡೆಸಿದರು.
ನಂತರ ಸಭಾಧ್ಯಕ್ಷ ಯು.ಟಿ.ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ಸುಗಮವಾಗಿ ಸದನ ನಡೆಯಿತು.