ಬಂಗಾರಪೇಟೆ : ರೈತ ಮತ್ತು ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಒಂದು ವರ್ಷದ ಅವಧಿ ಪೂರ್ಣಗೊಳಿಸುವ ಮುನ್ನವೇ ಕೋಟ್ಯಂತರ ರುಪಾಯಿ ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡಿದೆ, ಇಂತಹ ಭ್ರಷ್ಟ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ. ಮಹೇಶ್ ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ತೆರಳುವ ಮುನ್ನ ಪಟ್ಟಣ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಪ್ರತಿಭಟನೆ ಮಾಡಿ ಬಳಿಕ ಕ್ಷೇತ್ರದಿಂದ 500ಕ್ಕೂ ಹೆಚ್ಚು ಜನರು ತೆರಳಿದರು.
ಸರ್ಕಾರ ವಿಸರ್ಜಿಸಲಿ:
ಈ ವೇಳೆ ಮಾತನಾಡಿದ ಬಿ.ವಿ. ಮಹೇಶ್ ಪರಿಶಿಷ್ಟರ ಕಲ್ಯಾಣ ಕಾರ್ಯಗಳಿಗಾಗಿ ಮೀಸಲಿಟ್ಟ 18 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿದ್ದಾರೆ. ಇದರೊಟ್ಟಿಗೆ ವಾಲ್ಮೀಕಿ ನಿಗಮದ 187 ಕೋಟಿ ಹಗರಣ ನಡೆಸಿದ್ದಾರೆ, ಈ ಕೂಡಲೇ ಸರ್ಕಾರ ವಿಸರ್ಜನೆಯಾಗಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರದ ಪ್ರತಿರೂಪ
ಹಿರಿಯ ಮುಖಂಡ ಕೆ ಚಂದ್ರಾರೆಡ್ಡಿ ಮಾತನಾಡಿ ಭ್ರಷ್ಟಾಚಾರದ ಪ್ರತಿರೂಪ ಕಾಂಗ್ರೆಸ್ ಪಕ್ಷವಾಗಿದ್ದು ದಲಿತ, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದು ಕೋಟ್ಯಂತರ ರುಪಾಯಿ ಹಗರಣ ನಡೆಸಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗೇಶ್, ಹನುಮಪ್ಪ, ಬಿ ಪಿ ಮಹೇಶ್, ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಣಸನಹಳ್ಳಿ, ಶ್ರೀನಿವಾಸ್, ಹುಲಿಬೆಲೆ ಪ್ರಸನ್ನ, ಸುರೇಶ್, ಬಿಂದು ಮಾಧವ್, ಪ್ರಭಾಕರ್ ರಾವ್, ಕೀಲುಕೊಪ್ಪ ಸುರೇಂದ್ರ, ಕಾರಹಳ್ಳಿ ಪ್ರತಾಪ್ ಇತರರು ಇದ್ದರು.