- ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ನಿಲ್ಲೋಲ್ಲ
ಬಿಜೆಪಿ ಪಕ್ಷದ ಮಡಿಕೆ ಒಡೆದುಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ಅದು ನಿಲ್ಲುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿರುವ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ದಿನವೇ ಬಿಜೆಪಿ ಮಡಿಕೆ ಒಡೆದುಹೋಗಿದೆ. ವಿಜಯೇಂದ್ರ ಅವರನ್ನು ಮಂತ್ರಿ ಮಾಡುವಂತೆ ಕೇಳಿದಾಗಲೂ ಮಾಡಲಿಲ್ಲ. ಈಗ ಪರಿಸ್ಥಿತಿಯ ಅರಿವಾಗಿ ಅದಕ್ಕೆ ತೇಪೆ ಹಾಕೋಕೆ ಹೋಗಿದ್ದಾರೆ. ಏನೇ ಮಾಡಿದರೂ ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಈಗ ಬರುವುದಿಲ್ಲ ಎಂದು ಖಡಕ್ಕಾಗಿ ನುಡಿದರು.ಯಡಿಯೂರಪ್ಪ ಇದ್ದ ಸಮಯದಲ್ಲೇ ಬಿಜೆಪಿ115 ಸ್ಥಾನ ದಾಟಲಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ. ವಿಜಯೇಂದ್ರ ಒಳ್ಳೆಯವನು. ಅವನ ಬಗ್ಗೆ ನನಗೆ ಗೌರವವಿದೆ. ವಿಜಯೇಂದ್ರ ನನ್ನ ಸ್ನೇಹಿತ. ಯಡಿಯೂರಪ್ಪನವರ ಬಗ್ಗೆಯೂ ಗೌರವವಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ವಿಚಾರವಾಗಿ, ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತಲು ಕಡಿಮೆ ಆಗುತ್ತಾರೆ ಎಂದು ಖಚಿತವಾಗಿ ನುಡಿದರು.