ಕನ್ನಡಪ್ರಭ ವಾರ್ತೆ, ತುಮಕೂರು
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಉತ್ಸಾಹಿ ತರುಣರಾಗಿದ್ದು, ವಿರೋಧ ಪಕ್ಷದಲ್ಲಿ ಇದ್ದುಕೊಂಡು ರಚನಾತ್ಮಕವಾದ ಟೀಕೆ ಮಾಡಿ ನಮ್ಮನ್ನು ಎಚ್ಚರಿಸಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಲಹೆ ನೀಡಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರ ಪಕ್ಷದವರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ರಾಜಕೀಯ ಉದ್ದೇಶವಿಟ್ಟುಕೊಂಡು ಅನಾವಶ್ಯಕವಾಗಿ ಟೀಕೆ ಟಿಪ್ಪಣಿ ಮಾಡುವುದು ಆರೋಗ್ಯಕರವಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.
ಜಾತಿ ಆಧಾರದ ಮೇಲೆ ಪಕ್ಷಗಳು ಈ ರೀತಿಯ ಹುದ್ದೆ ಕೊಡುವುದಿಲ್ಲ. ಆದರೆ, ಅದು ಚರ್ಚೆಯಾಗಬಹುದು ಎಂದ ಅವರು ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರ ಕೊಡುವುದಿಲ್ಲ. ಅವರ ಪಕ್ಷದ ನಡವಳಿ ಬಗ್ಗೆ ಕಾಮೆಂಟ್ ಮಾಡುವುದಕ್ಕಾಗುವುದಿಲ್ಲ ಎಂದರು.ಬಿಡದಿ ಹಾಗೂ ತುಮಕೂರು ಎರಡು ಕಡೆನೂ ಮೆಟ್ರೋ ಆಗುವ ವಿಚಾರದಲ್ಲಿ ಜಟಾಪಟಿ ಇಲ್ಲ. ಇದು ಫಸ್ಟ್, ಸೆಕೆಂಡ್ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಬಿಡದಿವರೆಗೂ ಮೆಟ್ರೋ ವಿಸ್ತರಣೆ ಮಾಡಿದರೆ ಬೆಂಗಳೂರು ಬೆಳೆಯುತ್ತದೆ. ಹಾಗೆಯೇ ತುಮಕೂರು ಬೆಳೆದರು ಒಳ್ಳೆಯದು ಎಂದರು.
ಯಾರೋ ಮಚ್ಚು ಹಿಡಿದುಕೊಂಡು ಓಡಾಡಿದರೆ ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಅಂತಹವರನ್ನು ಹಿಡಿದು ಒಳಗೆ ಹಾಕುತ್ತೇವೆ.ಬೆಂಗಳೂರಲ್ಲಿ ಪೊಲೀಸ್ ಕಮಿಷನರ್ ಎಲ್ಲಾ ರೌಡಿಗಳನ್ನು ಮಾನಿಟರ್ ಮಾಡುತ್ತಿದ್ದಾರೆ. ಅದೇ ರೀತಿ ತುಮಕೂರಿನಲ್ಲಿ ಮಾಡುತ್ತೇವೆ ಎಂದರು.