ನಮಗೆ ಮುಡಾ ನಿವೇಶನಗಳನ್ನು ನೀಡಿದ್ದೇ ಬಿಜೆಪಿ ಸರ್ಕಾರ: ಸಿದ್ದು

KannadaprabhaNewsNetwork | Updated : Jul 05 2024, 04:34 AM IST

ಸಾರಾಂಶ

‘ನಮಗೆ ನೀಡಿರುವ ನಿವೇಶನಗಳ ಬೆಲೆಗಿಂತ ನಮ್ಮ ಜಮೀನು ಮೌಲ್ಯವೇ ಹೆಚ್ಚು. ಇದು ಸರಿಯಿಲ್ಲ ಎನ್ನುವುದಾದರೆ ಮುಡಾ ನಿವೇಶನಗಳನ್ನು ಹಿಂಪಡೆಯಲಿ. ನಮ್ಮ 3.18 ಎಕರೆ ಜಮೀನಿಗೆ ಪರಿಹಾರವಾಗಿ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ 62 ಕೋಟಿ ರು. ಪರಿಹಾರ ನೀಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ‘ನಮಗೆ ನೀಡಿರುವ ನಿವೇಶನಗಳ ಬೆಲೆಗಿಂತ ನಮ್ಮ ಜಮೀನು ಮೌಲ್ಯವೇ ಹೆಚ್ಚು. ಇದು ಸರಿಯಿಲ್ಲ ಎನ್ನುವುದಾದರೆ ಮುಡಾ ನಿವೇಶನಗಳನ್ನು ಹಿಂಪಡೆಯಲಿ. ನಮ್ಮ 3.18 ಎಕರೆ ಜಮೀನಿಗೆ ಪರಿಹಾರವಾಗಿ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ 62 ಕೋಟಿ ರು. ಪರಿಹಾರ ನೀಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ. ನಮ್ಮ ಜಮೀನಿಗೆ ಪರಿಹಾರವಾಗಿ 2021ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುಡಾ ನಮಗೆ ನಿವೇಶನ ಹಂಚಿಕೆ ಮಾಡಿದೆ. ಈಗ ಬಿಜೆಪಿಯವರೇ ಸುಳ್ಳು ಆರೋಪ ಮಾಡಿದರೆ ಹೇಗೆ ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್‌ಎಸ್‌ಎಸ್ ಹೇಳಿದಂತೆ ಮಾತನಾಡುತ್ತಾರೆ. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಅಧಿಕಾರಾವಧಿಯಲ್ಲೇ ನೀಡಿದ್ದಾರೆ:

ನಿವೇಶನ ನೀಡಿದಾಗ 2021ನೇ ಇಸವಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೇ ಅಥವಾ 4ನೇ ಹಂತದಲ್ಲಿ ಕೊಡಿ ಎಂದು ನಾವು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ. ಅದರಂತೆ ಅವರು ನಿವೇಶನಗಳನ್ನು ನೀಡಿದ್ದಾರೆ. ಇದೀಗ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರುವುದು ತಪ್ಪು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಭೂಸ್ವಾಧೀನವಾದ ಜಾಗದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾವು ಇಂತಹ ಕಡೆಯೇ ನಿವೇಶನ ಕೊಡಿ ಎಂದು ಕೇಳಿಲ್ಲ. ನಿವೇಶನ ಹಂಚಿಕೆ ಮಾಡಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023ರಲ್ಲಿ ಸಚಿವರು 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರು.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಜಮೀನು 3.18 ಎಕರೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನಮಗೆ ಕೊಟ್ಟಿರುವುದು 38,264 ಚದರ ಅಡಿ. ಅಂದರೆ ಒಂದು ಎಕರೆಗಿಂತ ಕಡಿಮೆಯಿದೆ. ಪರಿಹಾರವಾಗಿ ಕೊಟ್ಟಿರುವ ನಿವೇಶನಗಳ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನಮ್ಮ ಜಮೀನಿನ ಮೌರುಕಟ್ಟೆ ಮೌಲ್ಯ 62 ಕೋಟಿಯಿದ್ದು ನಿವೇಶನಗಳ ಬೆಲೆ ಇದಕ್ಕಿಂತ ಕಡಿಮೆಯಿದೆ. ಹೀಗಾಗಿ ನಮಗೆ 62 ಕೋಟಿ ರು. ಪರಿಹಾರ ನೀಡಲಿ ಎಂದು ಮುಖ್ಯಮಂತ್ರಿಗಳು ಆಗ್ರಹಿಸಿದರು.

ನಗರಾಭಿವೃದ್ಧಿ ಸಚಿವರು ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತವನ್ನು ತೆಗೆದುಕೊಂಡು ಬಂದಿದ್ದಾರೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿ, ಇವೆಲ್ಲಾ ಸುಳ್ಳು ಆರೋಪ. ಅವರು ತಲೆ ಇಲ್ಲದೆ ಏನೇನೋ ಮಾತನಾಡುತ್ತಾರೆ ಎಂದು ಆರೋಪವನ್ನು ನಿರಾಕರಿಸಿದರು.

Share this article