ಬೆಂಗಳೂರು : ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ತಮಿಳುನಾಡು ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿ ವರದಿ ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆ ಕಾಪಾಡಲು ಸಮಾನ ಮನಸ್ಕ ರಾಜ್ಯಗಳು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಒಂದಾಗಿ ಚರ್ಚಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರದ ಧೋರಣೆ ಹಾಗೂ ಸಂವಿಧಾನ ವಿರೋಧಿ ನಡೆಗಳಿಂದಾಗಿ ‘ಸಹಕಾರ ಒಕ್ಕೂಟ ವ್ಯವಸ್ಥೆ’ ಈಗ ‘ಬಲಾತ್ಕಾರದ ಒಕ್ಕೂಟ ವ್ಯವಸ್ಥೆ’ ಆಗಿ ಬದಲಾಗುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹಾಗೂ ರಾಜ್ಯಗಳ ಸ್ವಾಯತ್ತತೆ ಕಾಪಾಡಲು ತಮಿಳುನಾಡು, ಕರ್ನಾಟಕ ಸೇರಿ ಸಮಾನ ಮನಸ್ಕ ರಾಜ್ಯಗಳು ಒಂದಾಗಬೇಕು. ಇದಕ್ಕೆ ಕರ್ನಾಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಭಾಷಾ ನೀತಿ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಹಣಕಾಸಿನ ವಿಕೇಂದ್ರೀಕರಣ ಅಥವಾ ಶಾಸಕಾಂಗ ಸ್ವಾಯತ್ತತೆ ವಿಷಯಗಳಲ್ಲಿ ರಾಜ್ಯಗಳ ಕಾನೂನುಬದ್ಧ ಸಾಂವಿಧಾನಿಕ ಹಕ್ಕೊತ್ತಾಯ ಪ್ರತಿಪಾದಿಸುವಲ್ಲಿ ಕರ್ನಾಟಕ ಧ್ವನಿಗೂಡಿಸಲಿದೆ. ಇವು ಸಾಂವಿಧಾನಿಕ ಹಕ್ಕುಗಳು. ಇದಕ್ಕಾಗಿ ಎಲ್ಲಾ ರಾಜಕೀಯಗಳೂ ರಾಜಕೀಯ ಲೆಕ್ಕಿಸದೆ ರಚನಾತ್ಮಕ ಒಕ್ಕೂಟವಾಗಿ ಒಂದಾಗಬೇಕು.


ಸಾಮೂಹಿಕ ಅಭಿವ್ಯಕ್ತಿಯಾಗಬೇಕು:

ಒಕ್ಕೂಟ ವ್ಯವಸ್ಥೆಯು ಒಂದು ಅಥವಾ ಎರಡು ರಾಜ್ಯಗಳ ಸೀಮಿತ ಪ್ರಯತ್ನ ಆಗಬಾರದು. ಇದು ಸಾಮೂಹಿಕ ಅಭಿವ್ಯಕ್ತಿಯಾಗಿ ಹೊರಹೊಮ್ಮಬೇಕು. ಇದನ್ನು ಇತ್ತೀಚೆಗೆ ನೀವು ನಮಗೆ ಬರೆದ ಪತ್ರವು ಒತ್ತಿ ಹೇಳುತ್ತದೆ. ಹೀಗಾಗಿ ಈ ಎಲ್ಲಾ ರಾಜ್ಯಗಳ ಪ್ರಶ್ನೆ ಹಾಗೂ ಕಾಳಜಿಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರವು ಕೇಂದ್ರ ಮಟ್ಟದಲ್ಲಿ ಅಧಿಕೃತ ವೇದಿಕೆ ಒದಗಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಪತ್ರದಲ್ಲಿ ಸಿದ್ದರಾಮಯ್ಯ ಅವರು ಪ್ರಸ್ತುತ ಜಾರಿಯಲ್ಲಿರುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತವನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆದಿದ್ದರು. ಇದು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಮಾಡಿದ ವ್ಯವಸ್ಥೆಯಲ್ಲ, ಬದಲಿಗೆ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂಬ ಸಾಂವಿಧಾನಿಕ ಭರವಸೆಯಾಗಿತ್ತು. ಆದರೆ, ಕಳೆದ ಕೆಲವು ದಶಕಗಳಿಂದ ಅಧಿಕಾರವು ಕೇಂದ್ರದತ್ತ ವಾಲಿರುವುದು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಹದಗೆಡಿಸಿದೆ’ ಎಂದು ಕಿಡಿಕಾರಿದ್ದಾರೆ.

ಮುಂದುವರಿದು, ಕೇಂದ್ರ ಸರ್ಕಾರವು ಸಮವರ್ತಿ ಪಟ್ಟಿಯನ್ನು ತನ್ನ ಇಚ್ಛೆಯಂತೆ ವ್ಯಾಖ್ಯಾನಿಸುತ್ತಿದೆ ಮತ್ತು ರಾಜ್ಯಪಾಲರ ಒಪ್ಪಿಗೆಯ ಪ್ರಕ್ರಿಯೆಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಇದರಿಂದಾಗಿ ಭಾರತದ ‘ಸಹಕಾರ ಒಕ್ಕೂಟ ವ್ಯವಸ್ಥೆ’ ಈಗ ‘ಬಲಾತ್ಕಾರದ ಒಕ್ಕೂಟ ವ್ಯವಸ್ಥೆ’ಯಾಗಿ ಬದಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ಟಾಲಿನ್‌ಗೆ ಧನ್ಯವಾದ ತಿಳಿಸಿದ ಸಿಎಂ:

ಇದೇ ವೇಳೆ, ಕೇಂದ್ರ-ರಾಜ್ಯ ಸಂಬಂಧಗಳ ಉನ್ನತ ಮಟ್ಟದ ಸಮಿತಿಯ ವರದಿ ಕಳುಹಿಸಿದ್ದಕ್ಕೆ ಧನವ್ಯಾದ ಸಲ್ಲಿಸುತ್ತೇನೆ. ಸಾಂವಿಧಾನಿಕ ತಿದ್ದುಪಡಿಯನ್ನು ಬಯಸುವ ಈ ಚಿಂತನಶೀಲ ಚರ್ಚೆ ಪ್ರಾರಂಭಿಸಿದ್ದಕ್ಕಾಗಿ ಶ್ಲಾಘಿಸುತ್ತೇನೆ. ವರದಿಯಲ್ಲಿ ಎತ್ತಲಾದ ಪ್ರಶ್ನೆಗಳು ಸೂಕ್ತವಾಗಿವೆ.

ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತವು ‘ರಾಜ್ಯಗಳ ಒಕ್ಕೂಟ’ ಎಂದಿದ್ದಾರೆ. ಒಕ್ಕೂಟ ವ್ಯವಸ್ಥೆಯು ಆಡಳಿತ ವಿಕೇಂದ್ರೀಕರಣದ ಖಾತರಿಯೇ ಹೊರತು ಅಧಿಕಾರ ಕೇಂದ್ರೀಕರಣದ ಸಾಧನವಲ್ಲ.

ಆದರೂ, ಕೇಂದ್ರ ಸರ್ಕಾರವು ರಾಜ್ಯಪಟ್ಟಿ, ಕೇಂದ್ರ ಪಟ್ಟಿ ಹಾಗೂ ಸಮವರ್ತಿ ಪಟ್ಟಿಯ ವ್ಯಾಖ್ಯಾನವನ್ನೇ ಬದಲಿಸಿ ರಾಜ್ಯದ ಹಕ್ಕುಗಳನ್ನು ಕಸಿಯುತ್ತಿದೆ. ಯೋಜನೆಗಳನ್ನು ಕೇಂದ್ರೀಕೃತ ವ್ಯವಸ್ಥೆಗೆ ತಂದು ರಾಜ್ಯದ ಹಕ್ಕುಗಳನ್ನು ಕಸಿಯುತ್ತಿದೆ. ಸಹಕಾರಿ ಒಕ್ಕೂಟವನ್ನು ಬಲವಂತದ ಒಕ್ಕೂಟವನ್ನಾಗಿ ಬದಲಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.