ಅಯೋಧ್ಯೆಗೆ ಹೋಗುವವರ ಹೆದರಿಸಲು ಬಿಕೆಎಚ್‌ ಹೇಳಿಕೆ: ಬಿಜೆಪಿ ಕಿಡಿ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಕರ್ನಾಟಕದಲ್ಲಿ ಗುಜರಾತ್‌ನ ಗೋಧ್ರಾ ರೀತಿ ಹತ್ಯಾಕಾಂಡ ನಡೆಯಲಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಶಾಸಕ ಬಿ.ಕೆ.ಹರಿಪ್ರಸಾದ್‌ ಅವರು ಅಯೋಧ್ಯೆಗೆ ತೆರಳದಂತೆ ಭಯ ಹುಟ್ಟಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಿಂದ ಅಯೋಧ್ಯೆಗೆ ಹೋಗುವ ರಾಮಭಕ್ತರನ್ನು ಹೆದರಿಸುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ರಾಜ್ಯದಲ್ಲಿ ಗುಜರಾತ್‌ನ ಗೋಧ್ರಾ ಹತ್ಯಾಕಾಂಡದಂತಹ ಮತ್ತೊಂದು ದುರಂತ ಆಗಬಹುದು ಎಂದು ಹೇಳುತ್ತಿದ್ದಾರೆ. ಅವರು ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದು, ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಬುಧವಾರ ವಿವಿಧೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ್ ಬೆಲ್ಲದ್‌ ಮತ್ತಿತರರು ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ.

ಸದಾನಂದಗೌಡ ಮಾತನಾಡಿ, ರಾಮಭಕ್ತರಿಗೆ ರಕ್ಷಣೆ ಬೇಡ. ಮೊದಲು ಹರಿಪ್ರಸಾದ್ ಅವರಿಗೆ ರಕ್ಷಣೆ ಕೊಡಬೇಕು. ಒಬ್ಬ ಜನಪ್ರತಿನಿಧಿಯಾಗಿ ಅವರು ಜನರಲ್ಲಿ ಭಯ ಮೂಡಿಸುತ್ತಿದ್ದು, ಭಯೋತ್ಪಾದಕನ ರೀತಿ ಕಾಣುತ್ತಿದ್ದಾರೆ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಹರಿಪ್ರಸಾದ್ ಆಡಿದ ಮಾತು ಗಂಭೀರವಾದದ್ದು. ಅವರೇ ನಂಬರ್ ಒನ್ ಭಯೋತ್ಪಾದಕ. ಅವರ ಮಾತಿನಿಂದ ಆಕ್ರೋಶಗೊಂಡ ಜನ ಕೈ ಕಾಲು ಮುರಿಯಬಹುದು. ಜನರಲ್ಲಿ ಭಾವನೆ ವ್ಯಕ್ತಪಡಿಸಿ ಪ್ರಚೋದನೆ ನೀಡುತ್ತಿದ್ದಾರೆ. ಹರಿಪ್ರಸಾದ್ ಮಾತಿನ ಮೂಲಕವಾದರೂ ಪ್ರಚೋದನೆ ಪಡೆದು ರೈಲಿಗೆ ಬೆಂಕಿ ಹಾಕೋಣ ಎಂದು ಕೆಲವರು ಯೋಚಿಸಬಹುದು ಎಂದರು.ಕಾನೂನಾತ್ಮಕ ಹೋರಾಟ:ಬಸವರಾಜ ಬೊಮ್ಮಾಯಿ ಮಾತನಾಡಿ, ಹರಿಪ್ರಸಾದ್ ಕರಸೇವಕರ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ ಹುಟ್ಟಿಸಲು ಈ ರೀತಿಯ ಹೇಳಿಕೆ ನೀಡಿದ್ದು, ಅವರ ಹೇಳಿಕೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಈಗ ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದರಿಂದ ಅದನ್ನು ತಡೆದುಕೊಳ್ಳಲಾಗದೇ ಹತಾಶರಾಗಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕೇವಲ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯಲ್ಲ. ಹರಿಪ್ರಸಾದ್ ಅವರ ಹೇಳಿಕೆ ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ ಪೂಜಾರಿಯ ಬಂಧನದ ಒಂದು ಭಾಗವಾಗಿದೆ ಎಂದು ಹೇಳಿದರು.

ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಎಐಸಿಸಿ ಮುಖಂಡ ಹರಿಪ್ರಸಾದ್ ಬಾಯಿಯಿಂದ ಇಂತಹ ಮಾತುಗಳು ಬರಬಾರದಿತ್ತು. ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರವನ್ನು ಇಡೀ ದೇಶವೇ ಒಪ್ಪಿದೆ. ಹೀಗಿದ್ದರೂ ಹರಿಪ್ರಸಾದ್‌ರಂಥವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ದುರಂತ. ರಾಜ್ಯ ಸರ್ಕಾರದ ರಕ್ಷಣೆಯ ಅವಶ್ಯಕತೆ ಇಲ್ಲವೆನಿಸುತ್ತದೆ. ಶ್ರೀರಾಮಚಂದ್ರನೇ ಜನರಿಗೆ ರಕ್ಷಣೆ ಕೊಡುತ್ತಾನೆ ಎಂದರು.ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹರಿಪ್ರಸಾದ್ ಮತ್ತೊಂದು ಗೋಧ್ರಾ ಘಟನೆ ನಡೆಯಬಹುದು ಎಂದಿದ್ದಾರೆ. ಅವರು ಹಿರಿಯ ಮುತ್ಸದ್ದಿ, ರಾಜಕಾರಣಿ. ಅವರೇ ಹೀಗೆ ಹೇಳುತ್ತಿದ್ದಾರೆ ಎಂದರೆ ಕಾಂಗ್ರೆಸ್ ಬಹುದೊಡ್ಡ ಪಿತೂರಿ ಮಾಡಲು ಹೊರಟಿದೆ ಎಂದರ್ಥ. ಆದ್ದರಿಂದ ದೇಶದಲ್ಲಿ ಗಲಭೆಯಾದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗುತ್ತದೆ. ರಾಜ್ಯದಲ್ಲಿ ಗಲಭೆ ನಡೆದರೆ ಸಿದ್ದರಾಮಯ್ಯ ಕಾರಣ ಆಗುತ್ತಾರೆ ಎಂದು ಎಚ್ಚರಿಕೆ ನೀಡಿದರು.ಆರ್‌.ಅಶೋಕ್‌ ಪ್ರತಿಕ್ರಿಯಿಸಿ, ಹಿಂದೂ- ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಈ ಹಿಂದೆ ವೀರಶೈವ- ಲಿಂಗಾಯತರ ಮಧ್ಯೆ ಬೆಂಕಿಹಚ್ಚಿದ್ದರು. ಜನರ ನಡುವೆ ಬೆಂಕಿ ಹಚ್ಚುವಲ್ಲಿ ಸಿದ್ದರಾಮಯ್ಯ ಅಂಬಾಸಿಡರ್ ಆಗಿದ್ದಾರೆ. ಇದನ್ನು ಸಹಿಸಲಾಗದು; ರಾಮ ಎಂದರೆ ಇವರಿಗೆ ಆಗಲ್ಲ. ರಾಮಮಂದಿರ ನಿರ್ಮಿಸಬಾರದು ಎಂಬ ಹುನ್ನಾರ ಇವರದಾಗಿತ್ತು. ಇದೀಗ ನಿರ್ಮಾಣವಾಗಿದೆ. ಹಿಂದೂಗಳನ್ನು ಹೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅರವಿಂದ್ ಬೆಲ್ಲದ್ ಮಾತನಾಡಿ, ಹಿಂದುಗಳನ್ನು ಭಯಪಡಿಸುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳೆ ಕೂಡಲೇ ಹರಿಪ್ರಸಾದ್ ಅವರನ್ನು ಒಳಗೆ ಹಾಕಿ. ಕೂಡಲೇ ಕೇಸ್ ಜಡಿದು ಒಳಹಾಕಿ. ಮುಸ್ಲಿಂರನ್ನ ಹಿಂದೂಗಳ ವಿರುದ್ಧ ದಾಳಿಗೆ ಸಿದ್ದತೆ ಮಾಡಿದಂತಿದೆ ಎಂದು ಕಿಡಿಕಾರಿದರು.ಹರಿಪ್ರಸಾದ್‌ ಬಂಧಿಸಿ ವಿಚಾರಣೆ ನಡೆಸಿ: ಮುತಾಲಿಕ್‌ಗೋದ್ರಾ ಮಾದರಿಯಲ್ಲಿ ಘಟನೆಯಾಗುತ್ತದೆ ಎನ್ನುವುದರ ಬಗ್ಗೆ ಬಿ.ಕೆ. ಹರಿಪ್ರಸಾದ್‌ ಅವರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್‌ ಹೇಳಿಕೆ ಖಂಡನೀಯ. ಗಂಡಾಂತರ ನಿರ್ಮಾಣ ಮಾಡಿ, ಪ್ರಚೋದನೆ ಕೊಡುವ ಹೇಳಿಕೆ ಇದಾಗಿದೆ. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಕಾಂಗ್ರೆಸ್‌ಗೆ ಹೊಟ್ಟೆ ಉರಿ ಹೆಚ್ಚಿಸಿದೆ. ಹೊಟ್ಟೆ ಕಿಚ್ಚಿನಿಂದ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

Share this article