ಕನ್ನಡಪ್ರಭ ವಾರ್ತೆ ಕೋಲಾರ
ಪ್ರಧಾನಿ ನರೇಂದ್ರ ಮೋದಿರನ್ನು ಸತತ ಮೂರನೇ ಬಾರಿಗೆ ಗೆಲ್ಲಿಸುವ ಉದ್ದೇಶದಿಂದ ಮತದಾರರನ್ನು ತಲುಪಲು ಪಕ್ಷದ ಸದಸ್ಯರು ಶುಕ್ರವಾರದಿಂದ ಮೂರು ದಿನ ಗ್ರಾಮ ಚಲೋ ಅಭಿಯಾನ ಕೈಗೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಗ್ರಾಮ ಚಲೋ ಅಭಿಯಾನದ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಬೂತ್‌ಗಳಲ್ಲಿ ಗೋಡೆ ಬರಹ: ಜಿಲ್ಲಾ ಘಟಕವು ಪ್ರತಿ ಬೂತ್‌ನಲ್ಲಿ ವಾಲ್ ಪೇಂಟಿಂಗ್‌ಗಳನ್ನು ಮಾಡುವುದರಲ್ಲಿ ತೊಡಗಿದೆ, ರಾಮ ಮಂದಿರ ನಿರ್ಮಿಸುವುದಾಗಿ ಹೇಳಿದ ಮಾತನ್ನು ಈಡೇರಿಸಲಾಗಿದೆ, ಹಿಂದುಗಳ ಭಾವನೆಗೆ ಗೌರವ ಸಿಕ್ಕುವ ರೀತಿ ಮೋದಿ ಮಾಡಿ ತೋರಿದ್ದಾರೆ. ಅವರನ್ನು ಮತ್ತೆ ಪ್ರಧಾನಿ ಮಂತ್ರಿ ಮಾಡಲು ನಾವು ಹಾಗೂ ಮತದಾರರು ಮೋದಿ ಜೊತೆ ನಿಲ್ಲುತ್ತೇವೆ ಎಂದು ನುಡಿದರು.
ನಿಯುಕ್ತಿಗೊಂಡಿರುವ ಕಾರ್ಯಕರ್ತರು ಮನೆ-ಮನೆಗೆ ಮೋದಿ ಸರಕಾರದ ಸಾಧನೆಯ ಪ್ರಚಾರ, ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಅಭಿಯಾನ, ಬೂತ್ ಸಶಕ್ತೀಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವ ಕಾರ್ಯ ಆಗಬೇಕು. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧವೂ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಜಂಬಾಪುರ ವಿನಯ್ ಕುಮಾರ್, ಓಹಿಲೇಶ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಸಂಚಾಲಕರಾದ ಎಚ್.ಶ್ರೀನಿವಾಸ್, ಮಾಜಿ ಕೂಡ ಅಧ್ಯಕ್ಷ ವಿಜಯ್ ಕುಮಾರ್, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ ಇದ್ದರು.