ಕನ್ನಡಪ್ರಭ ವಾರ್ತೆ ಕೋಲಾರ
ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಇಲ್ಲಿಯ ಲೋಕಸಭೆ ವ್ಯಾಪ್ತಿಗೆ ಸೇರಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಬಲ ವೃದ್ಧಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಥವಾ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಭಾರಿ ಬಹುಮತದಿಂದ ಆಯ್ಕೆಯಾಗುವುದು ಖಚಿತ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಬಿಡದಿಯ ತೋಟದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಕರೆದಿದ್ದ ಸಭೆಯಲ್ಲಿ ಜೆಡಿಎಸ್ ಪಕ್ಷವು ಮೈತ್ರಿಯೊಂದಿಗೆ ಹೆಚ್ಚಿನ ಸ್ಥಾನ ಪಡೆಯಬೇಕೆಂಬ ಒತ್ತಾಯ ಕೇಳಿಬಂದಾಗ, ಅವರು ಮೊದಲು ಪಕ್ಷವನ್ನು ಸಂಘಟಿಸುವ ಮೂಲಕ ಸಧೃಡಗೊಳಿಸಬೇಕೆಂದು ಸೂಚಿಸಿದ್ದಾರೆ ಎಂದರು.
5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ: ಕೋಲಾರ, ಮಂಡ್ಯ, ಹಾಸನ, ಮೈಸೂರು, ಬಿಜಾಪುರ, ಕಲ್ಬುರ್ಗಿ, ಉಡುಪಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಉತ್ತಮ ಬೆಂಬಲವಿದೆ. ರಾಜ್ಯದಲ್ಲಿ ಕನಿಷ್ಠ ೫ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ, ಎಲ್ಲ ಜಾತಿಗಳ ಸಮೀಕರಣ ಮಾಡಿಕೊಂಡು ಪಕ್ಷದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ವೈಯುಕ್ತಿಕ ಅಭಿವೃದ್ದಿ ವಿಚಾರಗಳನ್ನು ಹೊರತುಪಡಿಸಿದರೆ ಬೇರೇನೂ ಕಂಡು ಬರುತ್ತಿಲ್ಲ. ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ತೋಟಗಾರಿಕೆ ಬೆಳೆಗಳಿಗೆ ವಿವಿಧ ರೋಗಗಳು ಹರಡಿ ನಷ್ಟಗೊಂಡಿದೆ ರೈತರಿಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ.
ನೀರಿನ ಸಮಸ್ಯೆ ಉಂಟಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯನ್ನು ಕೇವಲ ೨ ಗಂಟೆಯಲ್ಲಿ ಮುಗಿಸಿ ಕೈತೊಳೆದು ಕೊಂಡು ಹೋದರೆ ಹೇಗೆ ಎಂದು ಪ್ರಶ್ನಿಸಿದರು.ಸರ್ಕಾರ ಆರ್ಥಿಕವಾಗಿ ದಿವಾಳಿ
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರ ಚರ್ಚಿಸುತ್ತಿಲ್ಲ. ಏಕೆಂದರೆ ರಾಜ್ಯ ಸರ್ಕಾರದ ಅರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ಕೇವಲ ಮಾಧ್ಯಮಗಳಿಗೆ ದಿನವು ಜಾಹೀರಾತುಗಳು ನೀಡುವ ಮೂಲಕ ಅಭಿವೃದ್ದಿ ಘೋಷಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಸಾಧನೆಯಾಗಿದೆ ಎಂದು ವ್ಯಂಗವಾಡಿದರು.