ನಾನು ಕೂಡ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೆ.ಎಸ್.ನಂಜುಂಡೇಗೌಡ

KannadaprabhaNewsNetwork |  
Published : Feb 08, 2024, 01:35 AM ISTUpdated : Feb 08, 2024, 07:42 AM IST
7ಕೆಎಂಎನ್ ಡಿ25 | Kannada Prabha

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ರಾಜ್ಯ ಬಿಜೆಪಿ ನಾಯಕರು ನನ್ನನ್ನು ಪರಿಗಣಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ರಾಜ್ಯ ಬಿಜೆಪಿ ನಾಯಕರು ನನ್ನನ್ನು ಪರಿಗಣಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ತಮ್ಮ ಹಿತೈಷಿಗಳ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. 

ಈಗಾಗಲೇ ಮಂಡ್ಯ ಕ್ಷೇತ್ರದಲ್ಲೂ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಮ್ಮ ಹಿತೈಷಿಗಳು ಒತ್ತಾಯಿಸುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಒಪ್ಪಿಕೊಂಡಿದ್ದೇನೆ. ನಮ್ಮವರಿಗೆ ನಿರಾಸೆಯಾಗದಂತೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಪಟ್ಟಿಯಲ್ಲಿ ಆಕಾಂಕ್ಷಿತನಾಗಿದ್ದೇನೆ ಎಂದರು.

ರಾಜ್ಯ, ಮಂಡ್ಯ ಜಿಲ್ಲೆ ಹಾಗೂ ತಾಲೂಕು ಕ್ಷೇತ್ರಗಳಲ್ಲಿ ಸುಮಾರು 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಹಲವು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಮುಖಂಡರು, ಜನರು ಸಂಪರ್ಕದಲ್ಲಿದ್ದು ನನ್ನ ಹೋರಾಟವನ್ನು ಗುರುತಿಸಿದ್ದಾರೆ ಎಂದರು.

ಇನ್ನೆರಡು ದಿನಗಳಲ್ಲಿ ನಮ್ಮವರೆಲ್ಲ ಸೇರಿ ಬಿಜೆಪಿ ರಾಜ್ಯಾಧಕ್ಷರನ್ನು ಭೇಟಿ ಮಾಡಿ ಲೊಕಸಭಾ ಚುನಾವಣೆ ಕುರಿತಾಗಿ ಚರ್ಚೆ ನಡೆಸಿ ನಮ್ಮನ್ನೂ ಕೂಡ ಪರಿಗಣಿಸಬೇಕು ಎಂದು ಒತ್ತಾಯ ಮಾಡುತ್ತೇವೆ. 

ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರು ಕೂಡ ಆಕಾಂಕ್ಷಿತರಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಕುರಿತಾಗಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ದನಾಗಿರುತ್ತೇನೆ ಎಂದರು.

ಸಭೆಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಹುಂಡವಾಡಿ ಮಹದೇವು, ರವಿಲಕ್ಷ್ಮಣ್, ರಾಮಚಂದ್ರ, ಶ್ರಿನಿವಾಸು, ಲಕ್ಷ್ಮಿನಾರಾಯಣ, ವಿಷಕಂಠು ಸೇರಿದಂತೆ ಇತರರ ಮುಖಂಡರು ಭಾಗವಹಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಳ: ನಂಜುಂಡೇಗೌಡ ಆಕ್ರೋಶ

ಶ್ರೀರಂಗಪಟ್ಟಣ: ತಾಲೂಕು ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ. ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ ಎಂದು ಕೆ.ಎಸ್.ನಂಜುಂಡೇಗೌಡ ದೂರಿದರು.

ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ. ಸರ್ಕಾರಿ ನೌಕರರು ಎಲ್ಲ ಕಚೇರಿಗಳಲ್ಲಿ ಲಂಚ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ಗ್ರಾಮಗಳಿಂದ ರೈತರು ತಮ್ಮ ಕೆಲಸಕ್ಕಾಗಿ ಕಚೇರಿಗಳಲ್ಲಿ ಅಲೆಯುತ್ತಿದ್ದು, ಲಂಚ ನೀಡದೆ ಕಚೇರಿ ಕೆಲಸಗಳು ನಡೆಯುವುದಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯದಂತೆ ಎಚ್ಚರ ವಹಿಸುವುದಾಗಿ ಹೇಳಿದ್ದರು. 

ಆದರೆ, ಭ್ರಷ್ಟಾಚಾರ ನಿಂತಿಲ್ಲ. ಬದಲಾಗಿ ಹೆಚ್ಚಾಗಿದೆ ಎಂದು ಕಿಡಿಕಾರಿದರು.ಸರ್ಕಾರಿ ನೌಕರರು ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ಬಗ್ಗೆ ಹಲವು ಬಾರಿ ಹೋರಾಟ ಪ್ರತಿಭಟನೆಗಳನ್ನೇ ನಡೆಸಿದರೂ ಲಂಚಾವತಾರ ನಿಂತಿಲ್ಲ. 

ತಕ್ಷಣದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳ ವಿರುದ್ಧವೇ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.

PREV

Recommended Stories

ನೆಂಟಸ್ತನ ಮಾತಾಡಲು ಬಂದಿಲ್ಲ: ಸ್ಪೀಕರ್‌ ವಿರುದ್ಧ ಕಂದಕೂರು ಕಿಡಿ
ನೈಸ್ ಭೂಸ್ವಾಧೀನ ರದ್ದುಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ