ಅನ್ಯಾಯ ಸರಿಪಡಿಸದಿದ್ದರೆ ಕೇಂದ್ರ ಸರ್ಕಾರ ಏಕೆ ಬೇಕು?

KannadaprabhaNewsNetwork |  
Published : Feb 08, 2024, 01:35 AM ISTUpdated : Feb 08, 2024, 07:45 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ಕರ್ನಾಟಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ತೆರಿಗೆ ಹಣ ಪಾವತಿ ಮಾಡದಿದ್ದರೆ, ಇದರಿಂದ ಆಗುವ ಅನ್ಯಾಯಕ್ಕೆ ನ್ಯಾಯ ಒದಗಿಸಲು ಕೇಂದ್ರ ವಿಫಲವಾದರೆ, ಕೇಂದ್ರ ಸರ್ಕಾರ ಏಕೆ ಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಒಂದು ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕಿರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದಿದೆ. ಕೇಂದ್ರ ಸರ್ಕಾರದ ಕೈಯಲ್ಲಿಲ್ಲ ಎಂದು ನಿರ್ಮಲಾ ಸೀತರಾಮನ್ ಅವರು ಹೇಳಿದ್ದಾರೆ. 

ನಿಮ್ಮ ಬಳಿ ಅಧಿಕಾರವೇ ಇಲ್ಲವಾದರೆ ಸರ್ಕಾರ ಯಾಕಿರಬೇಕು? ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನ. ಮನುಷ್ಯ ಹುಟ್ಟಿದ ನಂತರ ಏನಾದರೂ ಸಾಕ್ಷಿ ಬಿಟ್ಟು ಹೋಗಬೇಕು. ಅದರಂತೆ ಈ ಹೋರಾಟ ಮುಂದಿನ ಪೀಳಿಗೆಗೆ ಒಂದು ಸಾಕ್ಷಿಯಾಗಲಿದೆ. 

ಇಲ್ಲಿ ನಾನು ಹಾಗೂ ಮುಖ್ಯಮಂತ್ರಿ ಮಾತ್ರ ಬಂದು ಕೂತಿಲ್ಲ. ನಮ್ಮ ರಾಜ್ಯದ ಜನತೆ ಆರಿಸಿರುವ 138 ಶಾಸಕರು, ಪರಿಷತ್ ಸದಸ್ಯರು ಇಲ್ಲಿಗೆ ಬಂದು ರಾಜ್ಯದ ಜನರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಜನರ ಬೆವರು, ತೆರಿಗೆ, ನಮ್ಮ ಹಕ್ಕು. ಕರ್ನಾಟಕಕ್ಕೆ ನ್ಯಾಯ ಸಿಗಬೇಕು, ನಮ್ಮ ಪಾಲಿನ ಹಣ ನಮಗೆ ಸಿಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಹಸಿವು ನೀಗಿಸಲು ನಾವಿಲ್ಲಿ ಸೇರಿದ್ದೇವೆ ಎಂದು ಹೇಳಿದರು.

ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಬಿಜೆಪಿ ಸ್ನೇಹಿತರಿಗಿಲ್ಲ:ಬಿಜೆಪಿಯವರು ನಮ್ಮ ಹೋರಾಟದ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಟೀಕೆ-ಟಿಪ್ಪಣಿಯನ್ನು ನಾವು ಸ್ವಾಗತಿಸುತ್ತೇವೆ. ಟೀಕೆ ಮಾಡುತ್ತಿರುವ ನಮ್ಮ ಬಿಜೆಪಿ ಸ್ನೇಹಿತರಿಗೆ ನಾನು ಕೇಳುವುದಿಷ್ಟೇ. ಜನ ನಿಮ್ಮ ಪಕ್ಷದ 26 ಸಂಸದರನ್ನು ಆರಿಸಿದ್ದಾರೆ. ಆದರೆ, ನೀವು ಒಂದು ದಿನವಾದರೂ ರಾಜ್ಯದ ಪರವಾಗಿ ಹೋರಾಟ ಮಾಡಲಿಲ್ಲ. ರಾಜ್ಯದ ಹಿತದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಇಂಜಿನ್ ಗಳು ಫೇಲ್ ಆದವು. ಮುಖ್ಯಮಂತ್ರಿಯವರು ನಿಮ್ಮನ್ನು ಕರೆದುಕೊಂಡು ಹೋದರೂ ನೀವು ಕೇಂದ್ರ ಸರ್ಕಾರದ ಮುಂದೆ ತುಟಿ ಬಿಚ್ಚಲಿಲ್ಲ. ಹೀಗಾಗಿ, ಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡುವ ನೈತಿಕತೆ ನಿಮಗಿಲ್ಲ. ನಾವು ನಮ್ಮ ಜನರ ಬೆವರಿನ ಹಣ ಕೊಡಿ ಎಂದು ಕೇಳುತ್ತಿದ್ದೇವೆ. ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ಹೀಗಾಗಿ, ನಾವು ನಮ್ಮ ಪಾಲನ್ನು ಕೇಳುತ್ತಿದ್ದೇವೆ ಎಂದರು.ನಮ್ಮ ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಕೃಷಿ ಸಚಿವರು, ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬರದ ವಿಚಾರವಾಗಿ ವರದಿ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಯವರು, ಪ್ರಧಾನಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಪರಿಹಾರ ಕೋರಿದ್ದಾರೆ. ಆದರೂ, ಇದುವರೆಗೆ ನಯಾ ಪೈಸೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿ ಕಾರಿದರು.

ಕಳೆದ ವರ್ಷದ ಬಜೆಟ್ ಅನುದಾನವನ್ನೂ ಕೊಡಲಿಲ್ಲ ಯಾಕೆ?
ಕಳೆದ ವರ್ಷ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ಅನೇಕ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಈ ಘೋಷಣೆಯಾಗಿ ಒಂದು ವರ್ಷವಾದರೂ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ನೀಡಲಿದೆ ಎಂದಿದ್ದರು. 

ಈ ಘೋಷಣೆಯನ್ನು ಯಾಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.ಬರಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯ 100 ಮಾನವ ದಿನದ ಕೂಲಿಯನ್ನು 150ಕ್ಕೆ ಹೆಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಈ ಕೆಲಸ ಮಾಡಿಯೇ ಇಲ್ಲ. ಕಳಸಾ-ಬಂಡೂರಿ ವಿಚಾರದಲ್ಲಿ ಎಲ್ಲ ಅನುಮತಿ ಸಿಕ್ಕಿದೆ ಎಂದು ಸಂಭ್ರಮಾಚರಣೆ ಮಾಡಿದರು. 

ನಾವು ಟೆಂಡರ್ ಕರೆದರೂ ಇದುವರೆಗೂ ಈ ಯೋಜನೆಗೆ ಅನುಮತಿ ನೀಡಿಲ್ಲ, ಯಾಕೆ?. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಮುಂದಿನ ಹಣಕಾಸು ಆಯೋಗದಲ್ಲೂ ಅನ್ಯಾಯವಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಹೋರಾಟ ಮಾಡಿ ನಾವು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರದ ಹೋರಾಟ ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಇಲ್ಲ. ಅವರ ಪಕ್ಷದಲ್ಲೇ ನಿರ್ದೇಶಕರು, ನಿರ್ಮಾಪಕರು ಇದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆಯಿಂದ ಹಣ ಖಾಲಿ ಮಾಡಿಕೊಂಡು ದೆಹಲಿಗೆ ಬಂದಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮ ಹಣ ಖಾಲಿಯಾಗಿಲ್ಲ. ಸರ್ಕಾರ ನಡೆಸುವ ಸಾಮರ್ಥ್ಯ ನಮಗಿದೆ. ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ನೀಡಲಿ ಸಾಕು. ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದವರು ಬೇರೆ ರಾಜ್ಯಗಳಲ್ಲಿ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಇದು ಐತಿಹಾಸಿಕ ದಿನ: ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನ. ಮನುಷ್ಯ ಹುಟ್ಟಿದ ನಂತರ ಏನಾದರೂ ಸಾಕ್ಷಿ ಬಿಟ್ಟು ಹೋಗಬೇಕು. ಅದರಂತೆ ಈ ಹೋರಾಟ ಮುಂದಿನ ಪೀಳಿಗೆಗೆ ಒಂದು ಸಾಕ್ಷಿಯಾಗಲಿದೆ. ಕರ್ನಾಟಕಕ್ಕೆ ನ್ಯಾಯ ಸಿಗಬೇಕು. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಹಸಿವು ನೀಗಿಸಲು ನಾವಿಲ್ಲಿ ಸೇರಿದ್ದೇವೆ.- ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಕಟಕಟೆಗೆ ಜಿ ರಾಮ್‌ ಜಿ : ಕೇಂದ್ರ ವರ್ಸಸ್‌ ರಾಜ್ಯ ಖಾತ್ರಿ ಸಂಘರ್ಷ
ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ