ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು, ನಾಯಕರು ಯಾವುದೇ ಸಿದ್ಧಾಂತವನ್ನೂ ಬದಿಗೊತ್ತಲು ಸಿದ್ಧ ಎಂಬುದಕ್ಕೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೊಮ್ಮೆ ಉದಾಹರಣೆಯಾಗಿ ಹೊರಹೊಮ್ಮಿದೆ.

ಮುಂಬೈ: ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು, ನಾಯಕರು ಯಾವುದೇ ಸಿದ್ಧಾಂತವನ್ನೂ ಬದಿಗೊತ್ತಲು ಸಿದ್ಧ ಎಂಬುದಕ್ಕೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೊಮ್ಮೆ ಉದಾಹರಣೆಯಾಗಿ ಹೊರಹೊಮ್ಮಿದೆ.

ಕಾಂಗ್ರೆಸ್‌ ಮತ್ತು ಒವೈಸಿ ಅವರ ಎಂಐಎಂ ಜೊತೆ ಮೈತ್ರಿ

ವಿವಿಧ ಮುನಿಸಿಪಲ್‌ಗಳ ಮೇಯರ್‌, ಉಪಮೇಯರ್‌ ಸ್ಥಾನದ ಚುನಾವಣೆಯಲ್ಲಿ ಮಿತ್ರರನ್ನೇ ಸೋಲಿಸಲು ಸ್ಥಳೀಯ ಬಿಜೆಪಿ ನಾಯಕರು ಬದ್ಧ ವೈರಿಗಳಾದ ಕಾಂಗ್ರೆಸ್‌ ಮತ್ತು ಒವೈಸಿ ಅವರ ಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

ಅಕೋಲಾ ಜಿಲ್ಲೆಯ ಅಕೋಟ್‌ ಮುನ್ಸಿಪಲ್‌ನಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಬಿಜೆಪಿ, ಎಂಐಎಂ, ಶಿಂಧೆ ಸೇನೆ, ಉದ್ಧವ್‌ ಸೇನೆ, ಎನ್‌ಸಿಪಿ (ಅಜಿತ್‌, ಶರದ್‌) ಮತ್ತು ಸ್ವತಂತ್ರ ಅಭ್ಯರ್ಥಿಗಳು ಒಟ್ಟಾಗಿ ‘ಅಕೋಟ್‌ ವಿಕಾಸ್‌ ಮಂಚ್‌’ ಸ್ಥಾಪಿಸಿಕೊಂಡು ಕಾಂಗ್ರೆಸ್‌ ವಿರುದ್ಧ ಕಣಕ್ಕೆ ಇಳಿದಿವೆ.

ಮತ್ತೊಂದೆಡೆ ಅಂಬರ್‌ನಾಥ್‌ನಲ್ಲಿ ಶಿಂಧೆ ಶಿವಸೇನೆಯು ಒಂಟಿಯಾಗಿ 27 ಸೀಟುಗಳನ್ನು ಪಡೆದಿದ್ದರೂ ಬಿಜೆಪಿಯು ಎನ್‌ಸಿಪಿ (ಅಜಿತ್‌), ಕಾಂಗ್ರೆಸ್‌ ಜೊತೆ ಸೇರಿ 31 ಸೀಟು ಬಲದಿಂದ ಸೇನೆಯನ್ನು ಬದಿಗೊತ್ತಿ ಪಾಲಿಕೆ ಅಧಿಕಾರಕ್ಕೇರಿದೆ.

ಸಿಎಂ ಗರಂ:

ಬದ್ಧವೈರಿ ಕಾಂಗ್ರೆಸ್‌ ಮತ್ತು ಎಐಎಂಐಎಂ ಜೊತೆಗಿನ ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಇಂಥಹ ಮೈತ್ರಿಯು ಬಿಜೆಪಿಯ ಸಿದ್ಧಾಂತ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ. ಈ ಒಪ್ಪಂದಗಳನ್ನು ಪಕ್ಷ ಒಪ್ಪುವುದಿಲ್ಲ. ತೀರ್ಮಾನ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಮೈತ್ರಿಯನ್ನು ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಜೊತೆ ಕಾಂಗ್ರೆಸ್‌ ಮೈತ್ರಿ 

ಮುಂಬೈ: ಅಂಬರ್‌ನಾಥ ಮುನಿಸಿಪಾಲ್‌ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ 12 ಕೌನ್ಸಿಲರ್‌ಗಳನ್ನು ಕಾಂಗ್ರೆಸ್‌ ತನ್ನ ಪಕ್ಷದಿಂದ ಅಮಾನತು ಮಾಡಿದೆ.

ಥಾಣೆ ಜಿಲ್ಲೆಯ ಅಂಬರ್‌ನಾಥದಲ್ಲಿ ಚುನಾವಣೆ ಬಳಿಕ ಬಿಜೆಪಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ (ಅಜಿತ್‌) ಒಪ್ಪಂದ ಮಾಡಿಕೊಂಡು 27 ಸೀಟುಗಳನ್ನು ಪಡೆದಿದ್ದ ಶಿವಸೇನೆಯನ್ನು ಬದಿಗೊತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಘಟಕವು 12 ಕೌನ್ಸಿಲರ್‌ಗಳು ಮತ್ತು ಬ್ಲಾಕ್‌ ಅಧ್ಯಕ್ಷ ಪ್ರದೀಪ್‌ ಪಾಟೀಲ್‌ ಎಂಬಾತನನ್ನು ಅಮಾನತು ಮಾಡಿ, ಎಲ್ಲರಿಗೂ ಶೋಕಾಸ್‌ ನೋಟಿಸ್‌ ನೀಡಿದೆ.