ತುಳುನಾಡಿನಲ್ಲಿ ದೈವ ದೇವಸ್ಥಾನ ಜಾತ್ರೋತ್ಸವ ಸಂದರ್ಭ ನಡೆಯುತ್ತಿರುವ ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆಕ್ಷೇಪಿಸಿದ್ದಾರೆ.

ಮಂಗಳೂರು: ತುಳುನಾಡಿನಲ್ಲಿ ದೈವ ದೇವಸ್ಥಾನ ಜಾತ್ರೋತ್ಸವ ಸಂದರ್ಭ ನಡೆಯುತ್ತಿರುವ ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ. ಈ ನೆಲದ ಬಗ್ಗೆ ನಿಜವಾಗಿಯೂ ಬಿಜೆಪಿ ನಾಯಕರಿಗೆ ಆಸಕ್ತಿ, ಕಾಳಜಿ ಇದ್ದಿದ್ದರೆ ಅಧಿವೇಶನ ಸಂದರ್ಭ ಯಾಕೆ ಚರ್ಚೆ ಮಾಡದೆ ಮೌನವಾಗಿದ್ದರು? ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಬಹುದಿತ್ತಲ್ವೇ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.ತುಳುನಾಡಿನ ದೈವರಾಧನೆ, ಈ ನೆಲದ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಮಾತ್ರವಲ್ಲದೆ ಸದಾ ಬೆಂಬಲ ನೀಡುತ್ತಿದೆ. ಈ ನೆಲದ ಜಾನಪದ ಕ್ರೀಡೆ ಕಂಬಳಕ್ಕೆ ಅನುದಾನ, ದೈವ-ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಸೇರಿದಂತೆ ಕರಾವಳಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಜಾತ್ರೋತ್ಸವ ಸಂದರ್ಭ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಕಾನೂನು ಕಾರಣದಿಂದ ಕೋಳಿ ಅಂಕಕ್ಕೆ ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಶೋಭೆಯಲ್ಲ. ಬಿಜೆಪಿಯವರ ಮೌನವೇ ಕೋಳಿ ಅಂಕ ವಿಚಾರ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಉದ್ದೇಶ ಎಂದಿದ್ದಾರೆ.ಕೆಂಪು ಕಲ್ಲು ಗಣಿಗಾರಿಕೆ ಕ್ರಮಬದ್ಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕೆಂಪು ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ಲಂಗು ಲಗಾಮಿಲ್ಲದೆ ವ್ಯವಹಾರ ನಡೆಯುತ್ತಿತ್ತು. ರಾಜ್ಯ ಸರ್ಕಾರಕ್ಕೂ ಸಮರ್ಪಕವಾಗಿ ರಾಜಸ್ವ ಸಂದಾಯವಾಗದೆ ಅಕ್ರಮ ಚಟುವಟಿಕೆಗಳಿಗೆ ನೆರವಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಕ್ರಮಗಳಿಗೆ ಮೂಗುದಾರ ಹಾಕಿ ಕೆಂಪು ಕಲ್ಲು ಗಣಿಗಾರಿಕೆಯನ್ನು ಕ್ರಮಬದ್ಧಗೊಳಿಸಿ ಜನರಿಗೆ ಕೆಂಪು ಕಲ್ಲು ಸುಲಭವಾಗಿ, ಕಾನೂನು ರೀತಿಯಲ್ಲಿ ಸಿಗುವಂತಾಗಿದೆ ಎಂದು ಹರೀಶ್‌ ಕುಮಾರ್‌ ಹೇಳಿದ್ದಾರೆ.